ವೆನೆಜುವೆಲಾದಲ್ಲಿ ಭೂಕಂಪನ: ರಾಜಧಾನಿ ಕಾರಕಾಸ್‌ನಲ್ಲಿ ಕಟ್ಟಡಗಳು ಕುಸಿತ, ಜನರಲ್ಲಿ ಆತಂಕ!

earthquake
earthquake
Published on
ಕಾರಕಾಸ್ (ವೆನೆಜುವೆಲಾ): ವೆನೆಜುವೆಲಾದಲ್ಲಿ ಬುಧವಾರ ಸಂಜೆ ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು(earthquake) ಭಾರೀ ಆತಂಕ ಸೃಷ್ಟಿಸಿವೆ.
ಹೌದು, ಮೊದಲ ಭೂಕಂಪ 7.1 ಹಾಗೂ ಎರಡನೇ ಭೂಕಂಪ 7.5 ತೀವ್ರತೆಯಲ್ಲಿ ದಾಖಲಾಗಿದ್ದು, ರಾಜಧಾನಿ ಕಾರಕಾಸ್‌ನಲ್ಲಿ ಹಲವು ಕಟ್ಟಡಗಳು ಮತ್ತು ಮನೆಗಳಿಗೆ ಹಾನಿಯಾಗಿದೆ. ಗೋಡೆಗಳು ಕುಸಿದಿದ್ದು, ಜನರು ಆತಂಕದಿಂದ ರಸ್ತೆಗೆ ಓಡಿ ಬಂದಿದ್ದಾರೆ.

ಒಂದು ನಿಮಿಷದ ಅಂತರದಲ್ಲಿ 2 ಭೂಕಂಪ

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಮೊದಲ ಭೂಕಂಪದ ಕೇಂದ್ರಬಿಂದು ವೆನೆಜುವೆಲಾದ ಕರೀಬಿಯನ್ ಕರಾವಳಿಯ ಮೊರೋನ್ ಪ್ರದೇಶದ ಪಶ್ಚಿಮ ಭಾಗದಲ್ಲಿ ಇತ್ತು. ಇದು ಕಾರಕಾಸ್‌ನಿಂದ ಸುಮಾರು 168 ಕಿಲೋಮೀಟರ್ ದೂರದಲ್ಲಿದ್ದು, 22 ಕಿಲೋಮೀಟರ್ ಆಳದಲ್ಲಿ ಸಂಭವಿಸಿತು. ಇದರ ಬೆನ್ನಲ್ಲೇ ಕೇವಲ ಒಂದು ನಿಮಿಷದ ಬಳಿಕ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತು. ಇದರ ಕೇಂದ್ರಬಿಂದು ಮೊರೋನ್‌ನ ನೈಋತ್ಯ ಭಾಗದಲ್ಲಿ 16 ಕಿಲೋಮೀಟರ್ ದೂರದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಕಳೆದ ನೂರಕ್ಕೂ ಹೆಚ್ಚು ವರ್ಷಗಳಲ್ಲಿ ವೆನೆಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಇವು ಸೇರಿವೆ ಎಂದು ವರದಿಯಾಗಿದೆ.

ಕಾರಕಾಸ್‌ನಲ್ಲಿ ಕಟ್ಟಡಗಳಿಗೆ ಹಾನಿ

ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 6 ಗಂಟೆಯ ಬಳಿಕ ಭೂಕಂಪ ಸಂಭವಿಸಿದೆ. ಕಾರಕಾಸ್‌ನ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಜೋರಾಗಿ ಅಲುಗಾಡಿದ್ದು, ನಿವಾಸಿಗಳು ತಕ್ಷಣ ಹೊರಗೆ ಓಡಿ ಬಂದರು. ಕೆಲವು ಕಟ್ಟಡಗಳ ಗೋಡೆಗಳು ಕುಸಿದ ಪರಿಣಾಮ ಒಳಗಿದ್ದ ಪೀಠೋಪಕರಣಗಳು ರಸ್ತೆಯಿಂದಲೇ ಕಾಣುವಂತಾಗಿದ್ದವು. ನಗರದ ಕೆಲವು ಪ್ರದೇಶಗಳಲ್ಲಿ ಧೂಳಿನ ಮೋಡಗಳು ಎದ್ದಿದ್ದು, ವ್ಯಾಪಾರ ಕೇಂದ್ರಗಳು ಮತ್ತು ರೆಸ್ಟೋರೆಂಟ್‌ಗಳಿರುವ ಪ್ರದೇಶಗಳಲ್ಲಿ ಜನರು ಭಯದಿಂದ ರಸ್ತೆಗಳಲ್ಲಿ ಜಮಾಯಿಸಿದರು. ಸೂರ್ಯಾಸ್ತದ ಬಳಿಕವೂ ಹಲವರು ಮನೆಗಳಿಗೆ ಮರಳದೆ ಹೊರಗೇ ಉಳಿದಿದ್ದರು.

ರಕ್ಷಣಾ ಕಾರ್ಯಾಚರಣೆ ಆರಂಭ

ವೆನೆಜುವೆಲಾದ ಒಳಾಂಗಣ ಸಚಿವ ಡಿಯೋಸ್ಡಾಡೋ ಕಬೆಲ್ಲೊ ಅವರು, ಹಲವು ರಾಜ್ಯಗಳಲ್ಲಿ ಭೂಕಂಪದ ಕಂಪನಗಳು ಅನುಭವಕ್ಕೆ ಬಂದಿವೆ ಎಂದು ತಿಳಿಸಿದ್ದಾರೆ. ಕಾರಕಾಸ್‌ನ ಅಲ್ಟಮಿರಾ ಪ್ರದೇಶದಲ್ಲಿ ಮನೆಗಳು ಮತ್ತು ಕಟ್ಟಡಗಳು ಕುಸಿದಿರುವ ಬಗ್ಗೆ ಆತಂಕಕಾರಿ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಕೆಲವರಿಗೆ ಗಾಯಗಳಾಗಿರುವ ಸಾಧ್ಯತೆ ಇದ್ದು, ಆಂಬುಲೆನ್ಸ್ ಹಾಗೂ ತುರ್ತು ಸೇವಾ ವಾಹನಗಳಿಗೆ ರಸ್ತೆ ಬಿಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ನಿಯಮಾನುಸಾರ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜನರಲ್ಲಿ ಭಯದ ವಾತಾವರಣ

ಭೂಕಂಪದ ವೇಳೆ ಕಟ್ಟಡಗಳು ತೀವ್ರವಾಗಿ ಅಲುಗಾಡಿದ್ದರಿಂದ ಜನರು ಭಯಭೀತರಾಗಿದ್ದಾರೆ. ಮನೆಗಳಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿದ್ದು, ಅನೇಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಧಿಕಾರಿಗಳು ಸಂಭವನೀಯ ನಂತರದ ಕಂಪನಗಳ (Aftershocks) ಬಗ್ಗೆ ಎಚ್ಚರಿಕೆ ನೀಡಿದ್ದು, ಸದ್ಯಕ್ಕೆ ಮನೆಗಳ ಹೊರಗೇ ಸುರಕ್ಷಿತವಾಗಿ ಉಳಿಯುವಂತೆ ಸೂಚಿಸಿದ್ದಾರೆ. ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

ಸುನಾಮಿ ಎಚ್ಚರಿಕೆ

ಭೂಕಂಪದ ನಂತರ ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವರ್ಜಿನ್ ದ್ವೀಪಗಳಿಗಾಗಿ ಸುನಾಮಿ ಎಚ್ಚರಿಕೆ ಹೊರಡಿಸಿತು. ಡೊಮಿನಿಕನ್ ಗಣರಾಜ್ಯದ ಅಧಿಕಾರಿಗಳೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಪ್ಯೂರ್ಟೋ ರಿಕೊಗೆ ನೀಡಲಾಗಿದ್ದ ಎಚ್ಚರಿಕೆಯನ್ನು ಬಳಿಕ ಹಿಂಪಡೆಯಲಾಗಿದೆ. ವೆನೆಜುವೆಲಾ ಹಲವು ಭೂಪಟಲಗಳ ಸಂಗಮ ಪ್ರದೇಶದ ಸಮೀಪದಲ್ಲಿದ್ದರೂ, ಲ್ಯಾಟಿನ್ ಅಮೆರಿಕದ ಇತರ ದೇಶಗಳಿಗೆ ಹೋಲಿಸಿದರೆ ಇಲ್ಲಿ ಪ್ರಬಲ ಭೂಕಂಪಗಳು ಅಪರೂಪವಾಗಿವೆ. ಆದ್ದರಿಂದ ಈ ಭೂಕಂಪಗಳ ಸರಣಿ ದೇಶದಾದ್ಯಂತ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net