ದುರ್ಘಟನೆಯಲ್ಲಿ ಸುಮಾರು 107 ಕಾರ್ಮಿಕರ ದಾರುಣ ಅಂತ್ಯ
- ಚಿನ್ನದ ಗಣಿ ಕುಸಿದು ಸಂಭವಿಸಿದ ಭೀಕರ ದುರಂತ
- ದುರ್ಘಟನೆಯಲ್ಲಿ ಸುಮಾರು 107 ಕಾರ್ಮಿಕರ ದಾರುಣ ಅಂತ್ಯ
- ಇನ್ನೂ ನೂರಾರು ಕಾರ್ಮಿಕರು ಸಿಲುಕಿರುವ ಶಂಕೆ
- ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಬಾಂಗೈ: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿರುವ ಚಿನ್ನದ ಗಣಿ ಕುಸಿತಗೊಂಡ (Central African Republic Gold Mine Collapse) ಪರಿಣಾಮ ಸುಮಾರು ನೂರಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈ ಘಟನೆಯು ಜಾಂಬೊಯ್ನಲ್ಲಿರುವ ಪುರಾತನ ಗಣಿಯಲ್ಲಿ ಬುಧವಾರ (ಆ.19) ದುರ್ಘಟನೆ ಸಂಭವಿಸಿದ್ದು, ಅಲ್ಲಿನ ಸ್ವಸಹಾಯ ಗುಂಪಿನವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.
100 ಮೃತ ದೇಹ ಪತ್ತೆ!
ಮಾಹಿತಿ ಪ್ರಕಾರ, ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಇಲ್ಲಿವರೆಗೆ ಸುಮಾರು 107 ಕಾರ್ಮಿಕರ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗೂ ಇನ್ನೂ ಅನೇಕ ಕಾರ್ಮಿಕರು ಗಣಿಯಡಿಯಲ್ಲಿ ಸಿಲುಕಿದ್ದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಅಲ್ಲಿಯ ಸ್ವ-ಸಹಾಯ ಗುಂಪಿನವರು ಹೇಳುವಂತೆ ಸಂಪೂರ್ಣ ಗಣಿಯೇ ಒಮ್ಮೆಲೇ ಕುಸಿತ ಕಂಡ ಹಿನ್ನಲೆ, ಅಧಿಕ ಸಾವು ಸಂಭವಿಸಿದೆ, ನಮಗಿರುವ ಮಾಹಿತಿ ಪ್ರಕಾರ, ಇನ್ನೂ 150-200 ಕಾರ್ಮಿಕರು ಗಣಿಯಲ್ಲಿ ಸಿಲುಕಿದ್ದಾರೆ. ಆದರೆ ಅವರು ಬದುಕಿರುವ ಲಕ್ಷಣ ಬಹಳ ಕಡಿಮೆ ಎಂದು ಹೇಳಿದ್ದಾರೆ.
ಘಟನೆಗೆ ಕಾರಣವೇನು?
ಈ ದುರ್ಘಟನೆ ನಡೆಯಲು ಕಾರಣವೇನು ಎಂದು ಕೇಳಿದರೆ, ಈ ಚಿನ್ನದ ಗಣಿಯು ಕೇಂದ್ರ ಆಫ್ರಿಕಾದಲ್ಲಿರುವ ಅತ್ಯಂತ ಪುರಾತನವಾದ ಗಣಿಯಾಗಿದ್ದು, ಇಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನದ ಬದಲಿಗೆ, ಸಾಂಪ್ರದಾಯಿಕ ವಿಧಾನದಲ್ಲಿಯೇ ಗಣಿಗಾರಿಕೆ ನಡೆಸಲಾಗುತ್ತದೆ. ಹೀಗಾಗಿ ಇಲ್ಲಿ ಮಣ್ಣಿನ ಸವಕಳಿ ಹೆಚ್ಚಿನದಾಗಿ ನಡೆಯುತ್ತಿತ್ತು. ಯಾವುದೇ ಸುರಕ್ಷತೆ ಇಲ್ಲದೆ ಗಣಿಗಾರಿಕೆ ನಡೆಸಲು ಮುಂದಾದ ಹಿನ್ನಲೆ ಈ ದುರಂತ ಸಂಭವಿಸಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ,
(ಏಜನ್ಸೀಸ್).