ಶುಕ್ರವಾರದ ಪ್ರಾರ್ಥನೆಯ ವೇಳೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯ ನಂತರ ಪಾಕಿಸ್ತಾನದ ಕೊಹಾಟ್ ಮಸೀದಿಯಲ್ಲಿದ್ದ ಅವಶೇಷಗಳು 
ವಿದೇಶ

ಪಾಕಿಸ್ತಾನದಲ್ಲಿ ಮತ್ತೆ ರಕ್ತದೋಕುಳಿ; ಮಸೀದಿಯಲ್ಲಿ ಭೀಕರ ಸ್ಫೋಟ, 16 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ! Kohat Mosque Blast

ಕೊಹತ್​​: ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಮತ್ತೊಮ್ಮೆ ರಕ್ತಪಾತ ನಡೆದಿದೆ. ಕೊಹತ್ ಜಿಲ್ಲೆಯಲ್ಲಿರುವ ಪೊಲೀಸ್ ಲೈನ್ಸ್ ಮಸೀದಿ (Kohat Mosque Blast) ಯಲ್ಲಿ ಶುಕ್ರವಾರ (ಸೆ.18) ದ ವಿಶೇಷ ಪ್ರಾರ್ಥನೆ ವೇಳೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ್ದು, ದೇಶಾದ್ಯಂತ ಮತ್ತೆ ಭಯೋತ್ಪಾದನೆಯ ಕರಾಳ ನೆರಳು ಆವರಿಸಿದೆ.

ಕುಸಿದು ಬಿದ್ದ ಮಸೀದಿ ಗೋಡೆ!

ಪೊಲೀಸ್ ಲೈನ್ಸ್ ಹಳೆಯ ಆವರಣದ ಸಮೀಪವಿರುವ ಮಸೀದಿಯಲ್ಲಿ ನೂರಾರು ಭಕ್ತರು ಮಧ್ಯಾಹ್ನದ ಶುಕ್ರವಾರದ ಪ್ರಾರ್ಥನೆಯಲ್ಲಿ ನಿರತರಾಗಿದ್ದಾಗ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಮಸೀದಿಯ ಹೊರಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಆವರಣದ ಬೃಹತ್ ಗೋಡೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ.
ಸ್ಫೋಟದ ಬೆನ್ನಲ್ಲೇ ಪ್ರದೇಶದಲ್ಲಿ ಸರಣಿ ಗುಂಡಿನ ಸದ್ದು ಕೂಡ ಕೇಳಿಬಂದಿದೆ. ಸ್ಫೋಟಕಗಳನ್ನು ತುಂಬಿಕೊಂಡು ಬಂದ ವಾಹನವೊಂದು ಪೊಲೀಸ್ ಲೈನ್ಸ್ ಗೇಟ್‌ಗೆ ಡಿಕ್ಕಿ ಹೊಡೆಸಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯ ನಂತರ ಭದ್ರತಾ ಸಿಬ್ಬಂದಿ ಹಾಗೂ ಶಂಕಿತರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಘಟನೆ ತಿಳಿಯುತ್ತಿದ್ದಂತೆ ರೆಸ್ಕ್ಯೂ 1122 ತುರ್ತು ಸೇವಾ ಪಡೆಗಳು ಮತ್ತು ಪೊಲೀಸ್ ತಂಡಗಳು ಯುದ್ಧೋಪಾದಿಯಲ್ಲಿ ಸ್ಥಳಕ್ಕೆ ಧಾವಿಸಿವೆ. ಸ್ಫೋಟದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಮತ್ತು ಗಾಯಾಳುಗಳನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.
ಜಿಲ್ಲಾ ಕೇಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ತಾಹೀರ್ ಅಲಿ ಶಾ ಮಾಧ್ಯಮಗಳಿಗೆ ಮಾಹಿತಿ ನೀಡಿ, ಇದುವರೆಗೆ 15 ಮೃತದೇಹಗಳು ಹಾಗೂ 50ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ದೃಢಪಡಿಸಿದ್ದಾರೆ. ಒಂದೇ ಬಾರಿಗೆ ನೂರಾರು ಗಾಯಾಳುಗಳು ಆಸ್ಪತ್ರೆಗೆ ಹರಿದುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಟಿಟಿಪಿ (TTP) ಕೈವಾಡ ಶಂಕೆ?
ಸದ್ಯ ಕೊಹತ್-ಹಂಗು ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಪೊಲೀಸ್ ಲೈನ್ಸ್ ಸುತ್ತಮುತ್ತ ನೂರಾರು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಖೈಬರ್ ಪಖ್ತುಂಕ್ವಾ ಮುಖ್ಯಮಂತ್ರಿ ಮುಹಮ್ಮದ್ ಸೊಹೈಲ್ ಅಫ್ರಿದಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ. ಅಲ್ಲದೆ, ಘಟನೆಯ ಬಗ್ಗೆ ವಿಸ್ತೃತ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಭೀಕರ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರ ಸಂಘಟನೆ ಅಧಿಕೃತವಾಗಿ ಹೊತ್ತುಕೊಂಡಿಲ್ಲ. ಆದರೂ, ಖೈಬರ್ ಪಖ್ತುಂಕ್ವಾದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ತಾಲಿಬಾನ್ (TTP) ಸಂಘಟನೆಯು ಈ ರೀತಿಯ ದಾಳಿಗಳನ್ನು ನಡೆಸುತ್ತಿರುವುದು ಕಂಡುಬಂದಿದೆ.
ಕಳೆದ 2023ರ ಜನವರಿಯಲ್ಲಿ ಪೆಶಾವರದ ಪೊಲೀಸ್ ಲೈನ್ಸ್ ಮಸೀದಿಯಲ್ಲೂ ಇದೇ ರೀತಿಯ ಮಾರಣಾಂತಿಕ ಬಾಂಬ್ ಸ್ಫೋಟಗೊಂಡು 80ಕ್ಕೂ ಹೆಚ್ಚು ಜೀವಗಳು ಕಳೆದುಹೋಗಿದ್ದವು. ಈಗ ಅದೇ ಮಾದರಿಯಲ್ಲಿ ಕೊಹತ್‌ನಲ್ಲೂ ನಡೆದಿರುವ ಈ ದಾಳಿಯು ಪಾಕಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ, (ಏಜೆನ್ಸೀಸ್​).