ಮಡಿಲಲ್ಲಿದ್ದ 6 ತಿಂಗಳ ಕಂದಮ್ಮನ ಮೇಲೆ ಪಿಟ್‌ಬುಲ್ ದಾಳಿ; 20ಕ್ಕೂ ಹೆಚ್ಚು ಹೊಲಿಗೆ, ಬೆಚ್ಚಿಬೀಳಿಸುವ CCTV ದೃಶ್ಯ ವೈರಲ್​! Pitbull Attack

ಹರಿಯಾಣದಲ್ಲಿ ಪಿಟ್‌ಬುಲ್ ನಾಯಿಯೊಂದು 6 ತಿಂಗಳ ಮಗುವಿನ ಮೇಲೆ ಭೀಕರವಾಗಿ ದಾಳಿ ನಡೆಸಿದೆ.
ಹರಿಯಾಣದಲ್ಲಿ ಪಿಟ್‌ಬುಲ್ ನಾಯಿಯೊಂದು 6 ತಿಂಗಳ ಮಗುವಿನ ಮೇಲೆ ಭೀಕರವಾಗಿ ದಾಳಿ ನಡೆಸಿದೆ.
Published on
ಹರಿಯಾಣ: ಸಾಮಾಜಿಕ ಜಾಲತಾಣಗಳಲ್ಲಿ ಈಗ ಒಂದು ಭಯಾನಕ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಎದೆಬಡಿತ ಹೆಚ್ಚಿಸಿದೆ. ಮನೆಯ ಹೊರಗೆ ಮಹಿಳೆ ಮಡಿಲಲ್ಲಿದ್ದ ಆರು ತಿಂಗಳ ಹಸುಗೂಸಿನ ಮೇಲೆ ಪಿಟ್‌ಬುಲ್ (Pitbull Attack) ತಳಿಯ ನಾಯಿಯೊಂದು ಅನಿರೀಕ್ಷಿತವಾಗಿ ದಾಳಿ ನಡೆಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಮನೆಯ ಬಾಗಿಲು ತೆರೆದ ಕ್ಷಣಾರ್ಧದಲ್ಲಿ ನಾಯಿ ಆಕ್ರಮಣಕಾರಿ ರೂಪ ತಾಳಿ ಮಗುವನ್ನು ಕಚ್ಚಿಹೀಕಿರುವ ದೃಶ್ಯ ನೋಡುಗರ ಮೈಜುಮ್ಮೆನಿಸುವಂತೆ ಮಾಡಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ್ದರೂ, ಮೈಯೆಲ್ಲಾ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ನರಳಾಡುತ್ತಿದೆ.

ಕ್ಷಣಾರ್ಧದಲ್ಲಿ ನಡೆದ ದುರಂತ!

ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯ ಪ್ರಕಾರ, 6 ತಿಂಗಳ ಆ ಕಂದಮ್ಮ ತನ್ನ ಅತ್ತೆಯ ಮಡಿಲಲ್ಲಿ ಮನೆಯ ಹೊರಗಿನ ರಸ್ತೆಯಲ್ಲಿತ್ತು. ವಾತಾವರಣ ಸಂಪೂರ್ಣ ಶಾಂತವಾಗಿದ್ದು, ಯಾರೂ ಕೂಡ ಯಾವುದೇ ಅಪಾಯದ ಮುನ್ಸೂಚನೆ ನಿರೀಕ್ಷಿಸಿರಲಿಲ್ಲ.
ಆದರೆ, ಇದ್ದಕ್ಕಿದ್ದಂತೆ ಹತ್ತಿರದ ಮನೆಯ ಬಾಗಿಲು ತೆರೆದುಕೊಂಡಿತು. ಒಳಗಿನಿಂದ ಅಷ್ಟೇ ವೇಗವಾಗಿ ಹೊರಬಂದ ಉಗ್ರ ಪಿಟ್‌ಬುಲ್ ನಾಯಿ, ನೇರವಾಗಿ ಮಹಿಳೆ ಮಡಿಲಲ್ಲಿದ್ದ ಪುಟ್ಟ ಮಗುವಿನ ಮೇಲೆ ಎರಗಿದೆ. ಕ್ಷಣಮಾತ್ರದಲ್ಲಿ ಮಗುವನ್ನು ತನ್ನ ಬಲವಾದ ದವಡೆಗಳಿಂದ ಬಿಗಿಯಾಗಿ ಹಿಡಿದುಕೊಂಡಿತು.
ಅಲ್ಲಿದ್ದವರು ಗಾಬಗೊಂಡು ಮಗುವನ್ನು ಬಿಡಿಸಲು ಹರಸಾಹಸ ಪಟ್ಟರು. ಜನ ಒಟ್ಟುಗೂಡಿ ಎಷ್ಟೇ ಪ್ರಯತ್ನಿಸಿದರೂ ಆ ಕ್ರೂರ ನಾಯಿ ಮಗುವನ್ನು ಬಿಡಲು ಒಪ್ಪಲಿಲ್ಲ. ಕೊನೆಗೆ ಬಹಳ ಕಷ್ಟಪಟ್ಟು ಮಗುವನ್ನು ನಾಯಿಯ ಬಾಯಿಯಿಂದ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಹಾಗೂ ಅತ್ತೆ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.

ಮುಖ, ಹೊಟ್ಟೆ ಸೇರಿದಂತೆ 20ಕ್ಕೂ ಹೆಚ್ಚು ಹೊಲಿಗೆಗಳು!

ಈ ಭೀಕರ ದಾಳಿಯಲ್ಲಿ ಹಸುಗೂಸಿನ ಮುಖ, ಕೈಗಳು, ಕಾಲುಗಳು ಮತ್ತು ಹೊಟ್ಟೆಯ ಭಾಗಕ್ಕೆ ಅತಿ ಗಂಭೀರ ಗಾಯಗಳಾಗಿವೆ. ಹೊಟ್ಟೆಯ ಭಾಗದಲ್ಲಿ ನಾಯಿ ಆಳವಾಗಿ ಕಚ್ಚಿದ್ದರಿಂದ ಕೂಡಲೇ ಮಗುವನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಬರೋಬ್ಬರಿ 20ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿದ್ದಾರೆ.

ಅಪಾಯಕಾರಿ ನಾಯಿಗಳ ಸಾಕಣೆ ಬಗ್ಗೆ ಮತ್ತೆ ಭುಗಿಲೆದ್ದ ಆಕ್ರೋಶ!

ಈ ವಿಡಿಯೋ ಹೊರಬಿದ್ದ ಬಳಿಕ, ದೇಶಾದ್ಯಂತ ಅಪಾಯಕಾರಿ ತಳಿಯ ನಾಯಿಗಳನ್ನು ಮನೆಗಳಲ್ಲಿ ಸಾಕುವವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನಾಯಿಗಳು ಮಾಲೀಕರ ತಪ್ಪಿನಿಂದ ಆಕ್ರಮಣಕಾರಿಯಾಗುತ್ತವೆ ಹೊರತು ತಳಿಯದಲ್ಲ ಎಂದು ಕೆಲವರು ವಾದಿಸಿದರೆ, ಪಿಟ್‌ಬುಲ್‌ನಂತಹ ತಳಿಗಳು ಅತ್ಯಂತ ಅಪಾಯಕಾರಿ. ಸಣ್ಣ ಮಕ್ಕಳಿರುವ ಮನೆಗಳಲ್ಲಿ ಇಂತಹ ನಾಯಿಗಳನ್ನು ಸಾಕುವುದೇ ದೊಡ್ಡ ಅಪರಾಧ ಎಂದು ಬಹುತೇಕ ನೆಟ್ಟಿಗರು ಕಿಡಿಕಾರಿದ್ದಾರೆ.
ಸಾಕು ನಾಯಿಗಳ ವಿಷಯದಲ್ಲಿ ಜನ ಎಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಮಕ್ಕಳ ಬಳಿಗೆ ಇಂತಹ ನಾಯಿಗಳನ್ನು ಬಿಡುವಾಗ ಮಾಲೀಕರು ಹತ್ತು ಬಾರಿ ಯೋಚಿಸಬೇಕು ಮತ್ತು ಅತಿ ಎಚ್ಚರಿಕೆ ವಹಿಸಬೇಕು ಎಂಬ ದೊಡ್ಡ ಪಾಠವನ್ನು ಈ ಘಟನೆ ಕಲಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net