ನವದೆಹಲಿ: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ(Ali Khamenei) ಅವರ ಅಂತ್ಯಕ್ರಿಯೆ ಜುಲೈ 4ರಿಂದ 9ರವರೆಗೆ ಆರು ದಿನಗಳ ಕಾಲ ನಡೆಯಲಿದ್ದು, ಭದ್ರತಾ ಕಾರಣಗಳಿಂದ ಪುತ್ರ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರ ಭಾರತದ ಪ್ರತಿನಿಧಿ ಆಯತೊಲ್ಲಾ ಹಕೀಂ ಇಲಾಹಿ ತಿಳಿಸಿದ್ದಾರೆ. ಇಸ್ರೇಲ್‌ನಿಂದ ಭದ್ರತಾ ಬೆದರಿಕೆ ಹಾಗೂ ನಿಗಾ ಅಪಾಯ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಲಿ ಖಮೇನಿ ಅವರ ಅಂತಿಮ ವಿಧಿಗಳು ಜುಲೈ 4ರಂದು ಟೆಹ್ರಾನ್‌ನಲ್ಲಿ ಆರಂಭವಾಗಿ, ಜುಲೈ 9ರಂದು ಅವರ ಹುಟ್ಟೂರಾದ ಈಶಾನ್ಯ ಇರಾನ್‌ನ ಪವಿತ್ರ ನಗರ ಮಶ್ಹದ್‌ನಲ್ಲಿ ಅಂತ್ಯಸಂಸ್ಕಾರದೊಂದಿಗೆ ಮುಕ್ತಾಯಗೊಳ್ಳಲಿವೆ. ಈ ಅವಧಿಯಲ್ಲಿ ಕೋಮ್ ನಗರದಲ್ಲೂ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ವರದಿಯಾಗಿದೆ.
ಲಕ್ಷಾಂತರ ಜನ ಸೇರುವ ನಿರೀಕ್ಷೆ
ಆರು ದಿನಗಳ ಶೋಕಾಚರಣೆ ವೇಳೆ ಲಕ್ಷಾಂತರ ಜನರು ಅಂತಿಮ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಅಲಿ ಖಮೇನಿ ಅವರ ಭಾವಚಿತ್ರಗಳಿರುವ ಬೃಹತ್ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.
ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಮೃತದೇಹವನ್ನು ಸಾಮಾನ್ಯವಾಗಿ 24 ಗಂಟೆಯೊಳಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಅಂತಿಮ ವಿಧಿಗಳನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತದಿಂದ ನಿಯೋಗ
ಮೂಲಗಳ ಪ್ರಕಾರ, ಬಿಹಾರ ರಾಜ್ಯಪಾಲ ಜನರಲ್ ಸಯ್ಯದ್ ಹಸ್ನೈನ್ ಹಾಗೂ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಅವರು ಭಾರತದ ನಿಯೋಗದ ಭಾಗವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪರವಾಗಿ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಭಾಗವಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಂತ್ಯಕ್ರಿಯೆಗೆ ಆಹ್ವಾನ ನೀಡಿದ್ದರೂ, ಪ್ರಧಾನಿ ಮೋದಿ ನಿಯೋಗದ ಭಾಗವಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಇರಾನ್-ಅಮೆರಿಕ ಮಾತುಕತೆ ಮುಂದುವರಿಕೆ
ಕಳೆದ ತಿಂಗಳು ಇರಾನ್ ಮತ್ತು ಅಮೆರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಮಧ್ಯಪ್ರಾಚ್ಯದಲ್ಲಿ ಎರಡೂ ದೇಶಗಳ ನಡುವೆ ಕೆಲ ದಿನಗಳ ಕಾಲ ಉದ್ವಿಗ್ನತೆ ಮುಂದುವರಿದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಶಾಂತವಾಗಿರುವ ಲಕ್ಷಣಗಳು ಕಂಡುಬಂದಿವೆ.
ಕತಾರ್‌ನ ದೋಹಾದಲ್ಲಿ ಅಮೆರಿಕ ಹಾಗೂ ಇರಾನ್ ಪ್ರತಿನಿಧಿಗಳೊಂದಿಗೆ ನಡೆದ ಪ್ರತ್ಯೇಕ ಸಭೆಗಳಲ್ಲಿ 14 ಅಂಶಗಳ ಒಪ್ಪಂದ ಪತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಕಾರಾತ್ಮಕ ಪ್ರಗತಿ ಕಂಡುಬಂದಿದೆ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.