ರಸ್ ತನುರಾ ತೈಲ ಕೇಂದ್ರದ ಬಳಿ 'ಸೌದಿ ಅರಾಮ್ಕೋ'ಗೆ ಸೇರಿದ ಹೆಲಿಕಾಪ್ಟರ್ ಪತನ 
ವಿದೇಶ

ರಸ್ ತನುರಾದಲ್ಲಿ ವಾಯು ದುರಂತ: ಸೌದಿ ಅರಾಮ್ಕೋ ಹೆಲಿಕಾಪ್ಟರ್ ಪತನ; 14 ನಾಗರಿಕರ ದುರ್ಮರಣ! Saudi Aramco Helicopter Crash

ಪ್ರಮುಖ ಮುಖ್ಯಾಂಶಗಳು

  • ರಸ್ ತನುರಾ ತೈಲ ಕೇಂದ್ರದ ಬಳಿ 'ಸೌದಿ ಅರಾಮ್ಕೋ'ಗೆ ಸೇರಿದ ಹೆಲಿಕಾಪ್ಟರ್ ಪತನ
  • ಸೌದಿ ಅರೇಬಿಯಾದ ಇಂಧನ ದೈತ್ಯ ಕಂಪನಿ 'ಸೌದಿ ಅರಾಮ್ಕೋ'ಗೆ ಸೇರಿದ ಹೆಲಿಕಾಪ್ಟರ್
  • ಅಪಘಾತದಲ್ಲಿ, 14 ಸೌದಿ ನಾಗರಿಕರ ದುರ್ಮರಣ
ರಿಯಾದ್: ಸೌದಿ ಅರೇಬಿಯಾದ ಇಂಧನ ದೈತ್ಯ ಕಂಪನಿ ಸೌದಿ ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ( Saudi Aramco Helicopter Crash) ಭಾನುವಾರ (ಜೂ.28) ಪತನಗೊಂಡಿದ್ದು, ಭೀಕರ ಅಪಘಾತದಲ್ಲಿ ಕನಿಷ್ಠ 14 ಜನರು ದುರ್ಮರಣಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.
ಸೌದಿ ಅರೇಬಿಯಾದ ಪ್ರಮುಖ ತೈಲ ಕೇಂದ್ರವಾದ ರಸ್ ತನುರಾ ಎಂಬಲ್ಲಿ ಈ ಘಟನೆ ನಡೆದಿದ್ದು, ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಸೌದಿ ಅರೇಬಿಯಾದ ನಾಗರಿಕರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಏನಿದು ಘಟನೆ?

ಸೌದಿ ಅರಾಮ್ಕೋ ಕಂಪನಿಯ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಹೆಲಿಕಾಪ್ಟರ್ ಹಠಾತ್ತನೆ ಪತನಗೊಂಡಿದೆ. ಆದರೆ, ಈ ಹೆಲಿಕಾಪ್ಟರ್ ಯಾವ ಕಾರಣದಿಂದ ಪತನಗೊಂಡಿತು? ತಾಂತ್ರಿಕ ದೋಷವೇ? ಅಥವಾ ಹವಾಮಾನ ವೈಪರೀತ್ಯವೇ? ಎಂದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಅಧಿಕಾರಿಗಳು ಮೃತರ ಗುರುತು ಅಥವಾ ಘಟನೆಯ ಹಿಂದಿನ ನಿಖರ ಕಾರಣಗಳ ಬಗ್ಗೆ ಇನ್ನು ಯಾವುದೇ ಅಧಿಕೃತ ವಿವರಗಳನ್ನು ಬಿಟ್ಟುಕೊಟ್ಟಿಲ್ಲ.
ತನಿಖೆಗೆ ಆದೇಶಿಸಿದ ಸೌದಿ ಸರ್ಕಾರ
ದುರಂತದ ಬೆನ್ನಲ್ಲೇ ಸೌದಿ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖಾ ತಂಡಗಳು ಈಗಾಗಲೇ ಸ್ಥಳಕ್ಕೆ ಧಾವಿಸಿವೆ. ಈ ಹಂತದಲ್ಲಿ ಅಪಘಾತಕ್ಕೆ ನಿಖರ ಕಾರಣ ಏನೆಂದು ಹೇಳುವುದು ಕಷ್ಟ. ಬ್ಲ್ಯಾಕ್ ಬಾಕ್ಸ್ ಮತ್ತು ಧ್ವಂಸಗೊಂಡ ಅವಶೇಷಗಳ ಪರಿಶೀಲನೆಯ ನಂತರವಷ್ಟೇ ಸತ್ಯ ಹೊರಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಧನ ಸಚಿವಾಲಯದಿಂದ ಸಂತಾಪ

ಈ ಭೀಕರ ಅಪಘಾತಕ್ಕೆ ಸೌದಿ ಅರೇಬಿಯಾದ ಇಂಧನ ಸಚಿವಾಲಯ ಕಣ್ಣೀರು ಹಾಕಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸಚಿವಾಲಯ, ಇಂಧನ ಸಚಿವಾಲಯವು ಮೃತರ ಕುಟುಂಬಗಳಿಗೆ ತನ್ನ ಸಂತಾಪ ಮತ್ತು ಅನುಕಂಪವನ್ನು ವ್ಯಕ್ತಪಡಿಸುತ್ತದೆ. ಸರ್ವಶಕ್ತನಾದ ದೇವರು ಅವರಿಗೆ ಕರುಣೆ ಮತ್ತು ಕ್ಷಮೆಯನ್ನು ನೀಡಲಿ ಮತ್ತು ಅವರನ್ನು ಹುತಾತ್ಮರನ್ನಾಗಿ ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದೆ.

ರಸ್ ತನುರಾ ಏಕೆ ಮುಖ್ಯ?

ಈ ದುರಂತ ನಡೆದಿರುವ ರಸ್ ತನುರಾ ಪ್ರದೇಶವು ಸೌದಿ ಅರೇಬಿಯಾಕ್ಕೆ ಅತ್ಯಂತ ಸೀಕ್ರೆಟ್ ಹಾಗೂ ಮುಖ್ಯವಾದ ಜಾಗವಾಗಿದೆ. ಇದು ಪಶ್ಚಿಮ ಏಷ್ಯಾ ವಲಯದಲ್ಲೇ ಅತಿ ದೊಡ್ಡ ತೈಲ ಸಂಸ್ಕರಣಾಗಾರವನ್ನು ಹೊಂದಿರುವ ನಗರವಾಗಿದೆ. ಅಷ್ಟೇ ಅಲ್ಲದೆ, ಜಗತ್ತಿನಲ್ಲೇ ಅತಿ ದೊಡ್ಡ ಕಚ್ಚಾ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದಾಗಿರುವ ಕಾರಣ, ಸೌದಿ ಅರಾಮ್ಕೋ ಕಂಪನಿಯ ಬಹುಪಾಲು ಪ್ರಮುಖ ಕಾರ್ಯಾಚರಣೆಗಳು ಇಲ್ಲಿಂದಲೇ ನಡೆಯುತ್ತವೆ, (ಏಜನ್ಸೀಸ್​).