ಬೆಲ್ಜಿಯಂನಲ್ಲಿ ಬರೋಬ್ಬರಿ 100 ಕೋಟಿ ಮೌಲ್ಯದ ಚಿನ್ನ ಪತ್ತೆ 
ವಿದೇಶ

ಒಳಚರಂಡಿ ರಿಪೇರಿ ವೇಳೆ ಸಿಕ್ಕಿದ್ದು 100 ಕೋಟಿ ಚಿನ್ನ: ಬೆಲ್ಜಿಯಂನಲ್ಲಿ ಪತ್ತೆಯಾಯ್ತು ಭೂಗತ ಖಜಾನೆ; ಕಾರ್ಮಿಕರ ಪ್ರಾಮಾಣಿಕತೆಗೆ ಮ್ಯಾನೇಜರ್ ಸೆಲ್ಯೂಟ್​! 100 Crore Gold in Belgium

ಪ್ರಮುಖ ಮುಖ್ಯಾಂಶಗಳು

  • ಬೆಲ್ಜಿಯಂನಲ್ಲಿ ಬರೋಬ್ಬರಿ 100 ಕೋಟಿ ಮೌಲ್ಯದ ಚಿನ್ನ ಪತ್ತೆ
  • ಒಳಚರಂಡಿ ರಿಪೇರಿ ಕೆಲಸದ ವೇಳೆ ಪತ್ತೆಯಾದ ನಿಧಿ
  • ಕಾರ್ಮಿಕರ ಪ್ರಾಮಾಣಿಕತೆಯನ್ನು ಮೆಚ್ಚಿದ ಮ್ಯಾನೇಜರ್
ಬೆಲ್ಜಿಯಂ: ಪುರಾತನ ಕಾಲದಲ್ಲಿ ಅವರ ವಾಸಿಸುವ ಮನೆಯ ನೆಲ ಮಾಳಿಗೆಗಳಲ್ಲಿ ಚಿನ್ನ, ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳನ್ನು ಹೂತಿಡುತ್ತಿದ್ದ ಕಥೆಗಳನ್ನು ಕೇಳಿರುತ್ತೇವೆ, ಹಾಗೂ ಇದೇ ರೀತಿಯ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ.

ಅದರೆ, ಇತ್ತೀಚೆಗೆ ಬೆಲ್ಜಿಯಂ ದೇಶದ ಮನೆಯೊಂದರಲ್ಲಿ ಭರ್ತಿ 100 ಕೋಟಿ ರೂಪಾಯಿ ಮೌಲ್ಯದ (100 Crore Gold in Belgium) ಚಿನ್ನದ ನಾಣ್ಯ ಮತ್ತು ಗಟ್ಟಿಗಳು ಪತ್ತೆಯಾಗಿದೆ.

ಒಳ ಚರಂಡಿ ರಿಪೇರಿ ವೇಳೆ ಆಶ್ಚರ್ಯ!

ಮಾಹಿತಿ ಪ್ರಕಾರ, ಈ ಘಟನೆಯು ಬೆಲ್ಜಿಯಂನ ಪೂರ್ವ ಫ್ಲಾಂಡರ್ಸ್​ನ ಡೆಂಡರ್​ಮೊಂಡೆ ಎಂಬಲ್ಲಿ ನಡೆದಿದೆ. ಪುರಾತನ ಬಂಗಲೆಯೊಂದರ ಒಳ ಚರಂಡಿ ದುರಸ್ಥಿ ಕೆಲಸ ನಡೆಯುತ್ತಿದ್ದು, ಫೈಪ್​ಲೈನ್​ ಕೂರಿಸಲು ನೆಲಮಾಳಿಗೆಯನ್ನು ಡ್ರಿಲ್​ ಮಾಡಿದಾಗ ಈ ಖಜಾನೆ ಪತ್ತೆಯಾಗಿದೆ.

ಈ ಕೆಲಸದಲ್ಲಿ ನಿರತನಾಗಿದ್ದ ಕೊಬೆ ಎಂಬ ಕಾರ್ಮಿಕನಿಗೆ ಮೊದಲು ಒಂದು ಪೌಂಡ್​ನ ನಾಣ್ಯ ಕಾಣಿಸಿದೆ. ನೂರಾರು ವರ್ಷದ ಪುರಾತನ ಬಂಗಲೆ, ಯಾವುದೇ ಹಳೆಯ ನಾಣ್ಯವಿರಬೇಕೆಂದು ಆತ ಭಾವಿಸಿದ್ದಾನೆ. ಆದರೆ ಡ್ರಿಲ್ಲಿಂಗ್​ ಕೆಲಸ ಮುಂದುವರಿದಂತೆ ಚಿನ್ನದ ನಾಣ್ಯಗಳು ಹಾಗೂ ಚಿನ್ನದ ಬಿಸ್ಕತ್ತುಗಳ ಮಳೆಯೇ ಸುರಿದಿದೆ. ಇದನ್ನು ನೋಡಿ ದಂಗಾದ ಕಾರ್ಮಿಕರು ಕೂಡಲೇ ತಮ್ಮ ಮ್ಯಾನೇಜರ್​​ನನ್ನು ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ.


ಪ್ರಾಮಾಣಿಕತೆ ಮೆರೆದ ಕಾರ್ಮಿಕರು!

ನಂತರ ಸ್ಥಳಕ್ಕೆ ಬಂದ ಮ್ಯಾನೇಜರ್​, ಮಾರಿಯೋ ಈ ನಿಧಿಯನ್ನು ನೋಡಿ ಬೆಚ್ಚಿಬಿದ್ದಿದ್ದಾಬೆ, ಎಲ್ಲಿ ನೋಡಿದರೂ ಬರೀ ಚಿನ್ನದ ನಾಣ್ಯಗಳು ಹಾಗೂ ಚಿನ್ನದ ಗಟ್ಟಿಗಳೇ ತುಂಬಿದ್ದವು. ಇಷ್ಟೊಂದು ಸಂಪತ್ತು ಅಲ್ಲಿದ್ದರೂ ಯಾವ ಕಾರ್ಮಿಕ ಕೂಡ ಅದಕ್ಕೆ ಆಸೆ ಪಡದೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯ ಮಾದ್ಯಮದವರೊಂದಿಗೆ ಮಾತನಾಡಿದ ಸೈಟ್​ ಮ್ಯಾನೇಜರ್​​ ಮಾರಿಯೋ, ತಮ್ಮ ಕಾರ್ಮಿಕರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. ಇಲ್ಲಿ ಹಚ್ಚು ಕಡಿಮೆ 9 ಮಿಲಿಯನ್​ ಪೌಂಡ್​ (100 ಕೋಟಿ ರೂಪಾಯಿ) ಮೌಲ್ಯದ ನಿಧಿಯಿದ್ದರೂ ಒಬ್ಬನೇ ಒಬ್ಬ ಕಾರ್ಮಿಕ ಒಂದು ನಾಣ್ಯವನ್ನೂ ಮುಟ್ಟಿಲ್ಲ, ಆ ಕೆಲಸ ಮಾಡುವುದು ಅವರಿಗೆ ಸುಲಭವಾಗಿತ್ತು, ಆದರೆ, ನನ್ನ ಕಾರ್ಮಿಕರು ಪ್ರಾಮಾಣಿಕತೆ ಎಂದರೇನೆಂದು ದೇಶಕ್ಕೆ ತೋರ್ಪಡಿಸಿದ್ದಾರೆ.

ಹಾಗೂ ಇಷ್ಟೊಂದು ನಿಧಿಯನ್ನು ಸಾಗಿಸುವುದು ಕಷ್ಟವಿತ್ತು, ಹಾಗೆಯೇ ಅದು ಕಳ್ಳತನ ಎನಿಸಿಕೊಳ್ಳುತ್ತಿತ್ತು. ಆದರೆ ನನ್ನ ಜನ ಅದಕ್ಕೆ ಯಾವುದೇ ಅವಕಾಶವನ್ನು ನೀಡದೇ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆಂದು ಹೇಳಿದ್ದಾರೆ.

ಈ ನಿಧಿ ಮಾಲೀಕ ಯಾರು?

ವರದಿ ಪ್ರಕಾರ, ನಿಧಿ ಸಿಕ್ಕ ಭೂಮಿ CAW Oost-Vlaanderen ಎಂಬ ಸಮಾಜ ಸೇವಾ ಸಂಸ್ಥೆಯ ಹೆಸರಿನಲ್ಲಿದೆ. ಆದರೆ ಬೆಲ್ಜಿಯಂ ದೇಶದ ಕಾನೂನಿನ ಪ್ರಕಾರ, 5 ವರ್ಷದವರೆಗೆ ದೊರೆತ ನಿಧಿಯ ನೈಜವಾರಸುದಾರರು ಪತ್ತೆಯಾಗದ ಪಕ್ಷದಲ್ಲಿ ನಿಧಿಯನ್ನು ಹುಡುಕಿದ ವ್ಯಕ್ತಿಗಳಿಗೆ ಹಂಚಲಾಗುತ್ತದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).