ನ್ಯೂಸ್

ಪ್ಲೀಸ್​ 1 ಅಥವಾ 2 ರೂ. ದಾನ ಮಾಡಿ ಐಫೋನ್​ 17 ಪ್ರೊ ಮ್ಯಾಕ್ಸ್ ಖರೀದಿಸಬೇಕು: ಫಾಲೋವರ್ಸ್​​ ಬಳಿ ಯುವತಿ ಮನವಿ! iPhone

iPhone : ಈ ತಿಂಗಳ ಆರಂಭದಲ್ಲಿ ಆ್ಯಪಲ್ ಐಫೋನ್ 17 ಪ್ರೊ ಮ್ಯಾಕ್ಸ್ ಬಿಡುಗಡೆಯಾಯಿತು. ಹೊಸ ಆವೃತ್ತಿಯ ಐಫೋನ್ ಖರೀದಿ ಮಾಡಲು ಅನೇಕ ರಾಜ್ಯಗಳಲ್ಲಿ ಗ್ರಾಹಕರು ಸರದಿ ಸಾಲಿನಲ್ಲಿ ನಿಂತ್ತಿದ್ದು ಭಾರಿ ಸುದ್ದಿ ಕೂಡ ವೈರಲ್​ ಆಯಿತು. ಇಂದಿಗೂ ಅನೇಕ ಮಂದಿ ಐಫೋನ್​ ಖರೀದಿಸಲು ಉತ್ಸುಕರಾಗಿದ್ದಾರೆ. ಹೀಗಿರುವಾಗ ಉತ್ತರ ಪ್ರದೇಶದ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಮಹಿ ಸಿಂಗ್ ಎಂಬಾಕೆ ಐಫೋನ್​ ಖರೀದಿಸಲು ಸಹಾಯ ಮಾಡುವಂತೆ ಜನರ ಬಳಿ ಮನವಿ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

ನನಗೆ ಅನಾರೋಗ್ಯವಿದೆ ಯಾರಾದರೂ ಸಹಾಯ ಮಾಡಿ ಎಂದು ಕೇಳುವವರನ್ನು ನೋಡಿದ್ದೇವೆ. ಅಷ್ಟೇ ಯಾಕೆ ವಿದ್ಯಾಭ್ಯಾಸಕ್ಕೆ ಅಥವಾ ಹಸಿವು ನೀಗಿಸಲು ಸಹಾಯ ಕೋರುತ್ತಾರೆ. ಈ ರೀತಿ ನೆರವು ಕೋರುವುದರಲ್ಲಿ ಒಂದು ಅರ್ಥ ಇದೆ. ಆದರೆ, ದುಬಾರಿ ಐಫೋನ್​ ಖರೀದಿ ಮಾಡಲು ಸಹಾಯ ಕೇಳುತ್ತಿರುವ ಏಕೈಕ ಯುವತಿ ಇವಳೇ ನೋಡಿ.

ಭಾರತದಲ್ಲಿ ಸುಮಾರು 1.49 ಲಕ್ಷ ರೂ. ಬೆಲೆಗೆ ಮಾರಾಟವಾಡುತ್ತಿರುವ ಐಫೋನ್​ 17 ಪ್ರೊ ಮ್ಯಾಕ್ಸ್​ ಖರೀದಿಸಲು ಒಂದು ಅಥವಾ ಎರಡು ರೂಪಾಯಿಗಳನ್ನು ತನಗೆ ಕಳುಹಿಸುವಂತೆ ಮಹಿ ಸಿಂಗ್​ ತನ್ನ ಫಾಲೋವರ್ಸ್​ ಬಳಿ ವಿನಂತಿಸಿಕೊಂಡಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.

ವಿಡಿಯೋದಲ್ಲಿ ಏನಿದೆ?

ನೀವು ನನಗೆ ಹಣ ನೀಡುವ ಮೂಲಕ ಸಹಾಯ ಮಾಡಿ. ಐಫೋನ್​ 17 ಪ್ರೊ ಬಿಡುಗಡೆಯಾಗಿದೆ ಮತ್ತು ನನಗೆ ಅದರ ಬಣ್ಣ ತುಂಬಾ ಇಷ್ಟವಾಯಿತು. ಮೂರು ತಿಂಗಳ ಹಿಂದೆ ನನ್ನ ತಂದೆ ನನಗೆ ಐಫೋನ್ 16 ಅನ್ನು ಖರೀದಿಸಿದರು. ಅಕ್ಟೋಬರ್ 21 ರಂದು ನನ್ನ ಹುಟ್ಟುಹಬ್ಬಕ್ಕೆ ನಾನು ಈ ಹೊಸ ಫೋನ್ ಖರೀದಿಸಲು ಬಯಸುತ್ತೇನೆ. ಆದರೆ, ನನ್ನ ತಂದೆ ನನಗಾಗಿ ಅದನ್ನು ಖರೀದಿಸುತ್ತಿಲ್ಲ. ನೀವೆಲ್ಲರೂ ತಲಾ ಒಂದು, ಎರಡು, ಮೂರು ಅಥವಾ ನಾಲ್ಕು ರೂಪಾಯಿಗಳನ್ನು ನೀಡುವ ಮೂಲಕ ನನಗೆ ಸಹಾಯ ಮಾಡಿದರೆ, ನಾನು ಈ ಫೋನ್ ಅನ್ನು ಖರೀದಿಸಬಹುದು. ನಾನೇನಾದರೂ ಫೋನ್​ ಖರೀದಿ ಮಾಡಿದರೆ ನನ್ನ ಹೃದಯದಿಂದ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ನಿಜವಾದರೆ, ನನ್ನ ಕನಸನ್ನು ನನಸಾಗಿಸುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಐಫೋನ್ 17 ಅನ್ನು ತುಂಬಾ ಪ್ರೀತಿಸುತ್ತೇನೆ, ಅದನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ ಎಂದು ಯುವತಿ ಹೇಳಿದ್ದಾಳೆ.

ಯುವತಿಯ ಈ ಮನವಿಯನ್ನು ಬೆಂಬಲಿಸುವವರು ಬೆರಳಣಿಕೆಯಾದರೆ, ಆಕೆಯ ವಿರುದ್ಧ ಸಾಕಷ್ಟು ಮಂದಿ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ತಂದೆ ಐಫೋನ್​ 16 ಕೊಡಿಸಿದ್ದಾರೆಂದರೆ, ನೀನೇನು ಆರ್ಥಿಕವಾಗಿ ದುರ್ಬಲಳಲ್ಲ, ಈ ರೀತಿ ಹಣ ಬೇಕು ಎಂದು ಕೇಳಲು ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)