ನ್ಯೂಸ್

ಸಂಕ್ರಾಂತಿ ಮರುದಿನವೇ ಕರೊನಾ ಲಸಿಕೆ ವಿತರಣೆ; ವೈದ್ಯಕೀಯ ಸಿಬ್ಬಂದಿಗೆ ಮೊದಲ ಆದ್ಯತೆ

ನವದೆಹಲಿ: ದೇಶದಲ್ಲಿ ಕರೊನಾ ಲಸಿಕೆಯ ಡ್ರೈ ವ್ಯಾಕ್ಸಿನೇಷನ್​ ಡ್ರೈವ್​ನ ಬೆನ್ನಲ್ಲೇ ಲಸಿಕೆ ವಿತರಣೆಗೆ ದಿನವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಸಂಕ್ರಾಂತಿ ಹಬ್ಬದ ಮಾರನೇ ದಿನ ಅಂದರೆ ಜನವರಿ 16ರಿಂದ ದೇಶಾದ್ಯಂತ ಲಸಿಕೆ ವಿತರಣೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿನ ಕರೊನಾ ಸ್ಥಿತಿಗತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಪರಿಶೀಲಿಸಿದ್ದಾರೆ. ಅದಾದ ನಂತರ ಲಸಿಕೆ ವಿತರಣೆ ದಿನದ ಕುರಿತಾಗಿ ಪ್ರಕಟಣೆ ಹೊರಡಿಸಲಾಗಿದೆ. ಜನವರಿ 16ರಿಂದ ಲಸಿಕೆ ವಿತರಣೆ ಆರಂಭವಾಗಲಿದೆ. ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಮೊದಲು ಆದ್ಯತೆ ನೀಡಲಾಗುವುದು. ಈಗಾಗಲೇ 3 ಕೋಟಿ ಸಿಬ್ಬಂದಿಯನ್ನು ಗುರುತಿಸಲಾಗಿದೆ ಎಂದು ತಿಳಿಸಲಾಗಿದೆ.

ನಂತರ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ (ಇತರೆ ಖಾಯಿಲೆಗಳಿಂದ ಬಳಲುತ್ತಿರುವವರು) 27 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರೊನಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪ್ರಧಾನಿಯವರು ಇಂದು ವರ್ಚ್ಯುವಲ್ ಸಭೆ ನಡೆಸಿದ್ದಾರೆ. ಕ್ಯಾಬಿನೆಟ್​ ಕಾರ್ಯದರ್ಶಿ, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್​)