ನವದೆಹಲಿ: ಭಾರತವು 5ಜಿ ನೆಟ್ವರ್ಕ್ನಲ್ಲಿ ಬ್ರಿಟನ್ ಹಾಗೂ ಜಪಾನನ್ನೂ ಹಿಂದಿಕ್ಕಿದ್ದು, ಜಾಗತಿಕವಾಗಿ ಅಗ್ರ ಹತ್ತನೇ ಸ್ಥಾನ ಗಳಿಸಿದೆ. ಸ್ಪೀಡ್ಟೆಸ್ಟ್ ಗ್ಲೋಬಲ್ ಇಂಡೆಕ್ಸ್ನ 2023ರ ಮೂರನೇ ತ್ರೖೆಮಾಸಿಕದಲ್ಲಿ ಭಾರತ ಈ ಸ್ಥಾನವನ್ನು ಗಳಿಸಿದೆ.
ದೇಶದಲ್ಲಿ 5ಜಿ ನೆಟ್ವರ್ಕ್ ಆರಂಭವಾದ ಒಂದೇ ವರ್ಷದಲ್ಲಿ ಈ ಸಾಧನೆ ಮಾಡುವ ಮೂಲಕ ಭಾರತ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ದಕ್ಷಿಣ ಕೊರಿಯಾ 5ಜಿ ನೆಟ್ವರ್ಕ್ನಲ್ಲಿ ಟಾಪ್ ಸ್ಥಾನದಲ್ಲಿವೆ. ಸ್ಪೀಡ್ಟೆಸ್ಟ್.ನೆಟ್ನ ಊಕ್ಲಾ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ವಿಶೇಷವೆಂದರೆ ಸ್ಟೀಡ್ಟೆಸ್ಟ್ ಗ್ಲೋಬಲ್ ಇಂಡೆಕ್ಸ್ನ 2022ರ ಸೆಪ್ಟೆಂಬರ್ ಮತ್ತು 2023ರ ಆಗಸ್ಟ್ ನಡುವಿನ ಅಂಕಿ-ಅಂಶದ ಪ್ರಕಾರ ಭಾರತ 5ಜಿ ನೆಟ್ವರ್ಕ್ನಲ್ಲಿ 72 ಸ್ಥಾನಗಳನ್ನು ಏರಿ ಈ ಸಾಧನೆಯನ್ನು ಮಾಡಿದೆ. ಈ ವರ್ಷದ ಮೂರನೇ ತ್ರೖೆಮಾಸಿಕದಲ್ಲಿ ಭಾರತ 5ಜಿಯಲ್ಲಿ ಸರಾಸರಿ 312.26 ಎಂಬಿಪಿಎಸ್ ಡೌನ್ಲೋಡ್ ಸ್ಪೀಡ್ ಹೊಂದುವ ಮೂಲಕ ಹತ್ತನೇ ಸ್ಥಾನ ಗಳಿಸಿ ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ತ್ರೖೆಮಾಸಿಕದಲ್ಲಿ 5ಜಿಯಲ್ಲಿ ಸರಾಸರಿ 312.09 ಎಂಬಿಪಿಎಸ್ ಡೌನ್ಲೋಡ್ ಸ್ಪೀಡ್ನೊಂದಿಗೆ ಬ್ರೆಜಿಲ್ ಈ ಸ್ಥಾನದಲ್ಲಿತ್ತು. ಆದರೆ ಈ ಸಲ ಬ್ರೆಜಿಲ್ 5ಜಿಯಲ್ಲಿನ ಸರಾಸರಿ ಡೌನ್ಲೋಡ್ ಸ್ಪೀಡ್ನಲ್ಲಿ 1.4 ಪಟ್ಟು ಹೆಚ್ಚಳ ಮಾಡಿಕೊಂಡಿದ್ದು, ಐದನೇ ಸ್ಥಾನಕ್ಕೇರಿದೆ. ಬ್ರೆಜಿಲ್ ಈ ತ್ರೖೆಮಾಸಿಕದಲ್ಲಿ 443.93 ಎಂಬಿಪಿಎಸ್ ಸ್ಪೀಡ್ ಹೊಂದಿದೆ.
ಮತ್ತೊಂದೆಡೆ ಈ ತ್ರೖೆಮಾಸಿಕದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಟಾಪ್-1 ಮತ್ತು ಟಾಪ್-2 ಸ್ಥಾನಗಳಲ್ಲಿವೆ. ಯುಎಇ 5ಜಿಯಲ್ಲಿ ಸರಾಸರಿ ಡೌನ್ಲೋಡ್ ಸ್ಪೀಡ್ 592.01 ಎಂಬಿಪಿಎಸ್ ಹೊಂದಿದ್ದರೆ, ದಕ್ಷಿಣ ಕೊರಿಯಾ 507.59 ಎಂಬಿಪಿಎಸ್ ಹೊಂದಿದೆ. ಕಳೆದ ತ್ರೖೆಮಾಸಿಕದಲ್ಲಿ ಸರಾಸರಿ ಡೌನ್ಲೋಡ್ ಸಾಮರ್ಥ್ಯ 511.68 ಎಂಬಿಪಿಎಸ್ ಹೊಂದಿದ್ದ ಯುಎಇ ಈ ತ್ರೖೆಮಾಸಿಕದಲ್ಲಿ ಶೇ. 14 ಹೆಚ್ಚಳ ಮಾಡಿಕೊಂಡಿದೆ. ಈ ತ್ರೖೆಮಾಸಿಕದಲ್ಲಿ ಮೂರನೇ ಸ್ಥಾನದಲ್ಲಿರುವ ಮಲೇಷ್ಯಾ 5ಜಿಯಲ್ಲಿ ಸರಾಸರಿ ಡೌನ್ಲೋಡ್ ಸಾಮರ್ಥ್ಯ 485.24 ಎಂಬಿಪಿಎಸ್ ಹೊಂದಿದೆ. ಉಳಿದಂತೆ ಈ ತ್ರೖೆಮಾಸಿಕದಲ್ಲಿ ನಾಲ್ಕನೇ ಸ್ಥಾನದಲ್ಲಿ ಕತಾರ್, ಆರು, ಏಳು, ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿ ಕ್ರಮವಾಗಿ ಡೊಮಿನಿಕನ್ ರಿಪಬ್ಲಿಕ್, ಕುವೈತ್, ಮಕಾವು ಮತ್ತು ಸಿಂಗಾಪುರ ಇವೆ.
ವರ್ಷದ ಹಿಂದೆ ಚಾಲನೆ ನೀಡಿದ್ದ ಮೋದಿ: ಪ್ರಧಾನಮಂತ್ರಿ ಮೋದಿ ಕಳೆದ ವರ್ಷದ ಅ.1ರಂದು ಭಾರತದಲ್ಲಿ 5ಜಿ ನೆಟ್ವರ್ಕ್ ಸೇವೆಗೆ ರಾಜಧಾನಿ ದೆಹಲಿಯಲ್ಲಿ ಚಾಲನೆ ನೀಡಿದ್ದರು. ಅಂದು ದೇಶದ 13 ನಗರಗಳಲ್ಲಿ 5ಜಿ ನೆಟ್ವರ್ಕ್ ಕಾರ್ಯಾರಂಭ ಮಾಡಿದ್ದು, ಆಗ ಏರ್ಟೆಲ್ ಬಳಕೆ ದಾರರಿಗಷ್ಟೇ ಈ ಸೇವೆ ಲಭ್ಯವಿತ್ತು.