ನ್ಯೂಸ್

ಸಚಿವ ಜೋಶಿ ನೇತೃತ್ವದ ಭಾರತೀಯ ಸಂಸದೀಯ ಸದ್ಭಾವನಾ ನಿಯೋಗದಿಂದ ಉರುಗ್ವೆ ಭೇಟಿ

ನವದೆಹಲಿ: ಮೊನ್ನೆಮೊನ್ನೆಯಷ್ಟೇ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದ ಸಂಸದೀಯ ಸದ್ಭಾವನಾ ನಿಯೋಗ ಬ್ರೆಜಿಲ್​ಗೆ ಭೇಟಿ ನೀಡಿದ್ದು, ಇದೀಗ ಅವರದೇ ನೇತೃತ್ವದ ಸಂಸದೀಯ ಸದ್ಭಾವನಾ ನಿಯೋಗ ಉರುಗ್ವೆಗೆ ಭೇಟಿ ನೀಡಿದೆ. ಓರಿಯಂಟಲ್ ರಿಪಬ್ಲಿಕ್ ಆಫ್ ಉರುಗ್ವೆ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಅಧ್ಯಕ್ಷರ ಆಹ್ವಾನದ ಮೇರೆಗೆ ಈ ಭೇಟಿ ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದ 10 ಸದಸ್ಯರ ಸಂಸದೀಯ ಸದ್ಭಾವನಾ ನಿಯೋಗವು ನಾಲ್ಕು ದಿನಗಳ ಕಾರ್ಯಕ್ರಮದ ಮೇರೆಗೆ ಜೂ. 14ರಂದು ಉರುಗ್ವೆಗೆ ಭೇಟಿ ನೀಡಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮತ್ತು ಗಾಢಗೊಳಿಸುವ ಉದ್ದೇಶದಿಂದ ಈ ಭೇಟಿ ಆಯೋಜಿಸಲಾಗಿದೆ.

ಈ ನಿಯೋಗವು ಎರಡೂ ಸದನಗಳಿಂದ ಒಂಬತ್ತು ಸಂಸತ್ ಸದಸ್ಯರನ್ನು ಒಳಗೊಂಡಿದೆ. ಲೋಕಸಭೆಯ ಸಂಜಯ್ ಸೇಠ್, ಗೋಮತಿ ಸಾಯಿ, ಹೇಮಂತ್ ಪಾಟೀಲ್, ಸಿ.ಎನ್.ಅಣ್ಣಾದೊರೈ, ಡಾ.ಗುರುಮೂರ್ತಿ ಮದ್ದಿಲ ಮತ್ತು ಚಂದ್ರಾನಿ ಮುರ್ಮು ಮತ್ತು ರಾಜ್ಯಸಭೆಯ ಇಂದು ಬಾಲಗೋಸ್ವಾಮಿ, ದಿನೇಶ್ಚಂದ್ರ ಅವವಾಡಿಯಾ ಮತ್ತು ನೀರಜ್ ಡಾಂಗಿ ಜೊತೆಗೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಜಿ.ಶ್ರೀನಿವಾಸ್ ಕೂಡ ನಿಯೋಗದಲ್ಲಿದ್ದಾರೆ. ಅರ್ಜೆಂಟೀನಾ ಮತ್ತು ಉರುಗ್ವೆಯ ಭಾರತದ ರಾಯಭಾರಿ ದಿನೇಶ್ ಭಾಟಿಯಾ ಜೂ. 14ರಂದು ಈ ನಿಯೋಗವನ್ನು ಸ್ವಾಗತಿಸಿದ್ದಲ್ಲದೆ, ದೇಶದ ಬಗ್ಗೆ ಮತ್ತು ಭಾರತದ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳ ಪ್ರಾಮುಖ್ಯತೆ ಹೆಚ್ಚುತ್ತಿರುವ ಬಗ್ಗೆ ನಿಯೋಗಕ್ಕೆ ವಿವರಿಸಿದರು.

ಭಾರತದ ಸಂಸದೀಯ ನಿಯೋಗ ಈ ಹಿಂದೆ 2012ರಲ್ಲಿ ಆಗಿನ ಲೋಕಸಭಾ ಸ್ಪೀಕರ್ ನೇತೃತ್ವದಲ್ಲಿ ಉರುಗ್ವೆಗೆ ಭೇಟಿ ನೀಡಿತ್ತು. ಅದಾದ ಬಳಿಕ ಇದೇ ನಂತರದ ಭೇಟಿಯಾಗಿದ್ದು, ನವದೆಹಲಿಯಲ್ಲಿ ಮಾರ್ಚ್​ನಲ್ಲಿ ನಡೆದ ಉಭಯ ದೇಶಗಳ ವಿದೇಶಾಂಗ ಕಚೇರಿ ಸಮಾಲೋಚನೆಗಳ ನಂತರ ಈ ಭೇಟಿ ಯೋಜನೆಗೊಂಡಿತ್ತು. ರಾಜಧಾನಿ ಮಾಂಟೆವಿಡಿಯೊದಲ್ಲಿ ಜೂ. 15ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ನಿಯೋಗದ ಸದಸ್ಯರೊಂದಿಗೆ ಭೇಟಿ ಅಧಿಕೃತವಾಗಿ ಪ್ರಾರಂಭವಾಯಿತು.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಅಂಡುಜರ್ ಜೂ. 15ರಂದು ನಿಯೋಗವನ್ನು ಸ್ವಾಗತಿಸಿದರು. ಉರುಗ್ವೆ ಸಂಸತ್ತಿನ ಉಭಯ ಸದನಗಳ ಸದಸ್ಯರು ಸಹ ಸೇರಿದ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸುವ ಜೊತೆಗೆ ಸಚಿವ ಜೋಶಿ ಮತ್ತು ಅಂಡುಜರ್ ಅವರು ಉರುಗ್ವೆ ಸಂಸತ್ತಿನಲ್ಲಿ ಭಾರತ-ಉರುಗ್ವೆ ಸಂಸದೀಯ ಸ್ನೇಹ ಗುಂಪನ್ನು ಪ್ರಾರಂಭಿಸಿದರು. ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸುವ, ವಿಶೇಷವಾಗಿ ಸಂಸದೀಯ ರಾಜತಾಂತ್ರಿಕತೆಯ ಮೂಲಕ ಕೇಂದ್ರೀಕರಿಸಿದ ಚರ್ಚೆ ನಡೆಯಿತು.

ಸಂಸದೀಯ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡುವಂತೆ ಸಚಿವ ಅಂಡುಜರ್ ಅವರನ್ನು ಸಚಿವ ಜೋಶಿ ಆಹ್ವಾನಿಸಿದರು. 2023ರ ಅಂತ್ಯದೊಳಗೆ ನಡೆಯಲಿರುವ ಈ ಭೇಟಿ ಕುರಿತ ದಿನಾಂಕಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಅಂತಿಮಗೊಳಿಸುವುದಾಗಿ ತಿಳಿಸಿದರು.

ರಾಯಭಾರಿ ಭಾಟಿಯಾ ಅವರೊಂದಿಗೆ ನಿಯೋಗವು ಉರುಗ್ವೆಯ ಉಪಾಧ್ಯಕ್ಷ ಮತ್ತು ಸೆನೆಟ್ (ಮೇಲ್ಮನೆ) ಅಧ್ಯಕ್ಷೆ ಬೀಟ್ರಿಜ್ ಅರ್ಗಿಮೊನ್ ಅವರನ್ನು ಭೇಟಿಯಾಯಿತು. ಈ ಅವಧಿಯಲ್ಲಿ ಅಧ್ಯಕ್ಷ ಲೂಯಿಸ್ ಲಕಾಲೆ ಪೌ ವಿದೇಶ ಪ್ರಯಾಣದಲ್ಲಿದ್ದ ಕಾರಣ ಬೀಟ್ರಿಜ್ ಗಣರಾಜ್ಯದ ಹಂಗಾಮಿ ಅಧ್ಯಕ್ಷರಾಗಿದ್ದರು. ಕೆಲವು ವರ್ಷಗಳ ಹಿಂದೆ ಭಾರತಕ್ಕೆ ನೀಡಿದ್ದ ಫಲಪ್ರದ ಮತ್ತು ಸ್ಮರಣೀಯ ಭೇಟಿಯನ್ನು ನಿಯೋಗವನ್ನು ಸ್ವಾಗತಿಸುವಾಗ ಅವರು ನೆನಪಿಸಿಕೊಂಡರು. ಅಲ್ಲದೆ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಕೈಗೊಂಡ ವಿವಿಧ ನೀತಿ ಉಪಕ್ರಮಗಳಿಂದಾಗಿ ಭಾರತದ ಕ್ಷಿಪ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಬಗ್ಗೆ ಎರಡೂ ಸಭೆಗಳಲ್ಲಿ ಸಚಿವ ಜೋಶಿ ಬೆಳಕು ಚೆಲ್ಲಿದರು.

ಉರುಗ್ವೆಯಲ್ಲಿ ನೆಲೆಸಿರುವ ಭಾರತೀಯರ ಸಂಘವಾದ ಇಂಡಿಯನ್ ಕಲ್ಚರಲ್ ಅಸೋಸಿಯೇಷನ್ ಆಫ್ ಉರುಗ್ವೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲೂ ನಿಯೋಗ ಭಾಗವಹಿಸಿತು. ಉರುಗ್ವೆಯ ಯೋಗ ಶಿಕ್ಷಕರ ಮಾರ್ಗದರ್ಶನದ ಧ್ಯಾನ ಅಧಿವೇಶನದ ಜೊತೆಗೆ ಸ್ಥಳೀಯ ಕಲಾವಿದರ ಶಾಸ್ತ್ರೀಯ ಒಡಿಸ್ಸಿ ನೃತ್ಯ ಪ್ರದರ್ಶನಕ್ಕೂ ನಿಯೋಗ ಸಾಕ್ಷಿಯಾಯಿತು. ಉರುಗ್ವೆಯಲ್ಲಿ ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಯೋಗ ಮತ್ತು ಧ್ಯಾನದ ಬಗ್ಗೆ ವ್ಯಾಪಕ ಮೆಚ್ಚುಗೆ ಇದೆ, ಭಾರತೀಯ ಯೋಗ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಸಾವಿರಾರು ಅನುಯಾಯಿಗಳು ಉರುಗ್ವೆಯಲ್ಲಿದ್ದಾರೆ. ಉರುಗ್ವೆಯಲ್ಲಿ 800ಕ್ಕೂ ಹೆಚ್ಚು ಭಾರತೀಯರು ವಾಸವಿದ್ದು, ಮಾಂಟೆವೀಡಿಯೊದಲ್ಲಿನ ಭಾರತೀಯ ಸಮುದಾಯ ಮತ್ತು ಭಾರತದ ಸ್ನೇಹಿತರೊಂದಿಗೆ ನಿಯೋಗ ಸಂವಾದ ನಡೆಸಿತು.

ಉರುಗ್ವೆ ಸರ್ಕಾರದಡಿ ರಫ್ತು, ಹೂಡಿಕೆಗಳು ಮತ್ತು ದೇಶದ ಚಿತ್ರಣವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿರುವ ಉರುಗ್ವೆ XXI ಏಜೆನ್ಸಿಯು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸುವ ಉದ್ದೇಶದ ಕುರಿತು ನಿಯೋಗಕ್ಕೆ ಜೂನ್ 16ರಂದು ಪ್ರಸ್ತುತಿಯನ್ನು ನೀಡಿತು. ನಿಯೋಗವು ಉರುಗ್ವೆಯಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಚೇರಿಗೆ ಭೇಟಿ ನೀಡಿತು. ಟಿಸಿಎಸ್ ಉರುಗ್ವೆಯಲ್ಲಿ ಖಾಸಗಿ ವಲಯದ ಅತಿದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ.

ಭಾರತ ಮತ್ತು ಉರುಗ್ವೆ ರಾಜತಾಂತ್ರಿಕ ಸಂಬಂಧಗಳ ಕುರಿತು 2020ರಲ್ಲಿ 60ನೇ ವರ್ಷವನ್ನು ಆಚರಿಸಿತ್ತು. ಅಲ್ಲದೆ ದ್ವಿಪಕ್ಷೀಯ ವ್ಯಾಪಾರವು ಕಳೆದ ಕೆಲವು ವರ್ಷಗಳಲ್ಲಿ ದೃಢವಾದ ಬೆಳವಣಿಗೆ ಕಂಡಿದ್ದು, 2022-23ರಲ್ಲಿ 350 ಮಿಲಿಯನ್ ಡಾಲರ್​ಗಿಂತ ಹೆಚ್ಚು ವಹಿವಾಟು ದಾಖಲಿಸಿದೆ. ವ್ಯಾಪಾರ ಮತ್ತು ಹೂಡಿಕೆಗಳ ಕುರಿತು ಎರಡೂ ರಾಷ್ಟ್ರಗಳ ಬದ್ಧತೆ ಮುಂದುವರಿದಿದೆ.

ದೂರದ ಮತ್ತು ಸ್ನೇಹಪರ ದೇಶದಲ್ಲಿ ಆರ್ಥಿಕ ಪ್ರಾಬಲ್ಯದ ಜೊತೆಗೆ ಭಾರತೀಯ ವೈವಿಧ್ಯತೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಈ ಭೇಟಿ ಭಾರಿ ಯಶಸ್ವಿಯಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಜಿ.ಶ್ರೀನಿವಾಸ್ ಬಣ್ಣಿಸಿದರು.