ನವದೆಹಲಿ: ಒಂದೆಡೆ ಕುತಂತ್ರಿ ಚೀನಾ ಲಡಾಖ್ ಗಡಿಯಲ್ಲಿ ತನ್ನ ಕ್ಯಾತೆ ಮುಂದುವರಿಸಿದ್ದರೆ, ಭಾರತೀಯ ಸೈನಿಕರು ಸಿಕ್ಕಿಂನ ಎತ್ತರ ಪ್ರದೇಶದಲ್ಲಿ ಸಿಲುಕಿ ದಾರಿ ಕಾಣದೆ ಪರದಾಡುತ್ತಿದ್ದ ಮೂವರು ಚೀನಾ ಪ್ರವಾಸಿಗರನ್ನು ರಕ್ಷಿಸಿ ಮಾನವೀಯತೆ ಸಂದೇಶವನ್ನು ಸಾರಿದೆ.
ಶುಕ್ರವಾರ ಈ ಘಟನೆ ನಡೆದಿದ್ದು, ಚೀನಾದ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಸೇನೆ, ಚೀನಾ ಪ್ರಜೆಗಳು ಸಿಕ್ಕಿಂನ ಶೂನ್ಯ ತಾಪಮಾನದಲ್ಲಿ ಸಿಲುಕಿದ್ದಾರೆಂಬ ಮಾಹಿತಿ ತಿಳಿಯಿತು. ಭಾರತೀಯ ಯೋಧರು ತಕ್ಷಣ ಸ್ಥಳಕ್ಕೆ ತೆರಳಿ, ಅವರಿಗೆ ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಉಡುಪು ಸೇರಿದಂತೆ ವೈದ್ಯಕೀಯ ನೆರವು ನೀಡಲಾಯಿತು. ವಿಪರೀತ ಎತ್ತರ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಂದ ರಕ್ಷಿಸಲಾಯಿತು ಎಂದು ತಿಳಿಸಿದೆ.
ಅಂದಹಾಗೆ ಚೀನಾ ಪ್ರವಾಸಿಗರು ಉತ್ತರ ಸಿಕ್ಕಿಂನ ಪ್ರಸ್ಥಭೂಮಿ ಪ್ರದೇಶದ 17,500 ಅಡಿ ಎತ್ತರ ಪ್ರದೇಶದಲ್ಲಿ ಸಿಲುಕಿದ್ದರು. ಯೋಧರು ಆಮ್ಲಜನಕ ಸಿಲಿಂಡರ್ ಸಾಗಿಸುತ್ತಿರುವ ಫೋಟೋಗಳನ್ನು ಸಹ ಟ್ವೀಟ್ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಅವರ ಗುರಿಯನ್ನು ತಲುಪಲು ಚೀನೀ ಪ್ರಜೆಗಳಿಗೆ ಭಾರತೀಯ ಯೋಧರು ಸೂಕ್ತ ಮಾರ್ಗದರ್ಶನವನ್ನು ನೀಡಿದರು. ಇದೇ ವೇಳೆ ತಮ್ಮನ್ನು ರಕ್ಷಿಸಿದ ಯೋಧರಿಗೆ ಚೀನೀ ಪ್ರಜೆಗಳು ಕೃತಜ್ಞತೆಗಳನ್ನೂ ಸಲ್ಲಿಸಿದರು ಎಂದು ಸೇನೆ ಹೇಳಿದೆ.
ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಬಳಿಕ ಲಡಾಖ್ ಗಡಿಯಲ್ಲಿ ಉಭಯ ದೇಶಗಳ ಸೇನಾ ಭದ್ರತೆ ಹೆಚ್ಚಿದೆ. ಅಲ್ಲದೆ, ಚೀನಾ ಸೇನೆ ನಿರಂತರವಾಗಿ ಭಾರತದ ವಿರುದ್ಧ ಕ್ಯಾತೆ ತೆಗೆಯುತ್ತಿದ್ದು, ಭಾರತವು ಸಹ ಹಲವು ಕಟ್ಟುನಿಟ್ಟಿನ ಕ್ರಮಗಳ ಮೂಲಕ ತಿರುಗೇಟು ನೀಡುತ್ತಿದೆ. (ಏಜೆನ್ಸೀಸ್)