

ಬೆಂಗಳೂರು: ಮಾದಕ ಜಾಲದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಸಿಸಿಬಿ ಅಧಿಕಾರಿಗಳಿಂದ ಬಂಧನವಾಗಿರುವ ನಟಿ ರಾಗಿಣಿ ಅನಾರೋಗ್ಯ ನೆಪವೊಡ್ಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದುಬಂದಿದೆ.
ರಾಗಿಣಿಯನ್ನು ಶುಕ್ರವಾರ ಸಿಸಿಬಿ ಬಂಧಿಸಿತ್ತು. ಬಳಿಕ ನ್ಯಾಯಾಧೀಶರ ಮಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ರಾತ್ರಿ ಮನೆಗೆ ಹೋಗಿ ಬೆಳಗ್ಗೆ ಸಿಸಿಬಿ ಕಚೇರಿಗೆ ಬರುವುದಾಗಿ ರಾಗಿಣಿ ಕೇಳಿಕೊಂಡಿದ್ದರು. ಆದರೆ, ಇದಕ್ಕೆ ಒಪ್ಪದ ನ್ಯಾಯಾಧೀಶರು ರಾಗಿಣಿ ಕೋರಿಕೆಯನ್ನು ರದ್ದು ಪಡಿಸಿದ್ದರು.
ಇದಾದ ಬಳಿಕ ರಾಗಿಣಿಯನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆಂದು ಸಿಸಿಬಿ ಅಧಿಕಾರಿಗಳು ಕರೆದೊಯ್ದಿದ್ದರು. ವೈದ್ಯಕೀಯ ತಪಾಸಣೆಯ ನಡುವೆಯೇ ರಾಗಿಣಿ ಹೈಡ್ರಾಮಾ ಮಾಡಿದ್ದಾರೆನ್ನಲಾಗಿದೆ.
ನನಗೆ ಬೆನ್ನು ನೋವಿದೆ. ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಡಾಕ್ಟರ್ ಮುಂದೆ ಡ್ರಾಮಾ ಮಾಡಿದ್ದಾರೆಂದು ಸಿಸಿಬಿ ಮೂಲಗಳು ತಿಳಿಸಿವೆ. ಇದಾದ ಬಳಿಕ ಹೊಸೂರು ರಸ್ತೆಯಲ್ಲಿರುವ ಮಹಿಳಾ ಸಂರಕ್ಷಣಾ ಕೇಂದ್ರಕ್ಕೆ ರಾಗಿಣಿಯನ್ನ ಸಿಸಿಬಿ ಸ್ಥಳಾಂತರಿಸಿತು. (ದಿಗ್ವಿಜಯ ನ್ಯೂಸ್)