ನ್ಯೂಸ್

ಆಂಧ್ರದ ವಿದ್ಯಾರ್ಥಿನಿ ಸಾವಿನ ಬಗ್ಗೆ ಅಮೆರಿಕ ಪೊಲೀಸ್​ ಅಪಹಾಸ್ಯ: ತನಿಖೆಗೆ ಒತ್ತಾಯಿಸಿದ ಭಾರತ

ನವದೆಹಲಿ: ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿನಿಯ ಸಾವಿನ ಕುರಿತು ಅಮೆರಿಕ ಪೊಲೀಸ್​ ಸಿಬ್ಬಂದಿ ಮಾಡಿದ ಅಪಹಾಸ್ಯ ಬಹಿರಂಗಗೊಂಡ ಬೆನ್ನಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ಯುಎಸ್​ ಸರ್ಕಾರವನ್ನು ತನಿಖೆಗೆ ಒತ್ತಾಯಿಸಿದೆ.

ಜಾಹ್ನವಿ ಕಂದುಲ (23) ಮೃತ ವಿದ್ಯಾರ್ಥಿನಿ. ಕಳೆದ ಜನವರಿಯಲ್ಲಿ ಕೆವಿನ್​ ಡೇವ್​ ಎಂಬ ಪೊಲೀಸ್​ ಅಧಿಕಾರಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಪೊಲೀಸ್​ ವಾಹನ ಚಲಾಯಿಸಿಕೊಂಡು ಹೋಗುವಾಗ ರಸ್ತೆ ದಾಟುತ್ತಿದ್ದ ಜಾಹ್ನವಿಗೆ ಡಿಕ್ಕಿಯಾಗಿ ಆಕೆ ಮೃತಪಟ್ಟಿದ್ದಳು. ಜಾಹ್ನವಿ ಅವರು ಸಿಯಾಟಲ್​ನ ನಾರ್ಥ್​ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಳು.

ಬಾಡಿವೋರ್ನ್​ ಕ್ಯಾಮೆರಾದಲ್ಲಿ ಸೆರೆ

ಸಿಯಾಟಲ್​ ಪೊಲೀಸ್​ ಇಲಾಖೆ ಸೋಮವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿದ್ಯಾರ್ಥಿನಿಗೆ ಕಾರು ಡಿಕ್ಕಿಯಾದ ಬಳಿಕ ಪೊಲೀಸ್​ ಸಿಬ್ಬಂದಿ ಆಕೆಯ ಸಾವನ್ನು ಅಪಹಾಸ್ಯ ಮಾಡಿರುವುದು ಬಹಿರಂಗವಾಗಿದೆ. ಪೊಲೀಸ್​ ಅಧಿಕಾರಿಗಳು ಧರಿಸಿದ್ದ ಬಾಡಿವೋರ್ನ್​ ಕ್ಯಾಮೆರಾದಲ್ಲಿ ಎಲ್ಲವೂ ಸೆರೆಯಾಗಿತ್ತು.

ಸೀಮಿತ ಮೌಲ್ಯವನ್ನು ಹೊಂದಿದ್ದಳು

ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರಿಗೆ ಕರೆ ಮಾಡಿದ್ದ ಕಾರಿನಲ್ಲಿದ್ದ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಔಡೆರೆರ್ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಆದರೆ, ಬಾಡಿ ವೋರ್ನ್​ ಕ್ಯಾಮೆರಾ ಇರುವುದನ್ನು ಗಮನಿಸದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದರು. ಆಕೆ ಸತ್ತು ಹೋದಳು ಎಂದು ಹೇಳಿ ಡೇನಿಯಲ್ ಔಡೆರೆರ್ ಗಹಗಹಿಸಿ ನಕ್ಕಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ಅಲ್ಲದೆ, ಜಾಹ್ನವಿ ಸಾಮಾನ್ಯ ವ್ಯಕ್ತಿ ಎಂದು ಹೇಳಿದ್ದಾರೆ. ಕೇವಲ ಒಂದು ಚೆಕ್​ ಬರೆದರೆ ಮುಗಿತು, ಅದು ಕೂಡ ಹನ್ನೊಂದು ಸಾವಿರ ಡಾಲರ್ ಎಂದು ಹೇಳಿ ನಕ್ಕಿದ್ದಾರೆ. ಏನೇ ಇರಲಿ ಆಕೆಗೆ 26 ವರ್ಷ. ಆಕೆ ಸೀಮಿತ ಮೌಲ್ಯವನ್ನು ಹೊಂದಿದ್ದಳು ಎಂದು ಅಪಘಾತವನ್ನು ಅಪಹಾಸ್ಯ ಮಾಡಿರುವುದು ಬಾಡಿವೋರ್ನ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇದೀಗ ಬಹಿರಂಗವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗಂಭೀರವಾಗಿ ಪರಿಗಣಿಸಿದ್ದೇವೆ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸವು ಜಾಹ್ನವಿ ಸಾವು ತುಂಬಾ ದುಃಖಕರ ಎಂದಿದೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ದುರಂತದಲ್ಲಿ ಭಾಗಿಯಾದವರ ವಿರುದ್ಧ ಸಮಗ್ರ ತನಿಖೆ ಮತ್ತು ಕ್ರಮಕ್ಕಾಗಿ ಸಿಯಾಟಲ್ ಮತ್ತು ವಾಷಿಂಗ್ಟನ್ ರಾಜ್ಯದ ಸ್ಥಳೀಯ ಅಧಿಕಾರಿಗಳು ಹಾಗೂ ವಾಷಿಂಗ್ಟನ್ ಡಿಸಿಯ ಹಿರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ ಎಂದು ದೂತವಾಸ ಕಚೇರಿ ಎಕ್ಸ್​ನಲ್ಲಿ ತಿಳಿಸಿದೆ.

ಜಾಹ್ನವಿ ಕಂದುಲಾ ಅವರು ಆಂಧ್ರಪ್ರದೇಶದ ಮೂಲದವರು. ಸಿಯಾಟಲ್‌ನ ನಾರ್ಥ್​ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. ನಮ್ಮ ಕುಟುಂಬಕ್ಕೆ ಹೇಳಲು ಏನೂ ಇಲ್ಲ. ಈ ಪುರುಷರ ಹೆಣ್ಣುಮಕ್ಕಳು ಅಥವಾ ಮೊಮ್ಮಕ್ಕಳಿಗೆ ಏನಾದರೂ ಮೌಲ್ಯವಿದೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ. ಜೀವನವು ಅಂದರೆ ಒಂದು ಜೀವನ ಅಷ್ಟೇ ಎಂದು ಜಾಹ್ನವಿ ಅವರ ಚಿಕ್ಕಪ್ಪ ಅಶೋಕ್ ಕಂದುಲಾ ನೋವಿನ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್​)