ನ್ಯೂಸ್

ಭಾರತದಲ್ಲಿ ಮೊದಲ Mpox ಪ್ರಕರಣ ಪತ್ತೆ!; ​​​ಮಂಕಿಪಾಕ್ಸ್​ ಭೀತಿಗೆ ಆರೋಗ್ಯ ಸಚಿವಾಲಯ ಹೇಳಿದಿಷ್ಟು..

ನವದೆಹಲಿ: ವಿಶ್ವದ ಅನೇಕ ದೇಶಗಳಲ್ಲಿ ವಿಧ್ವಂಸಕ ಸೃಷ್ಟಿಸಿರುವ ಮಂಕಿಪಾಕ್ಸ್​​ ಶಂಕಿತ ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ. ಮಂಗನ ಕಾಯಿಲೆ ಪೀಡಿತ ಪ್ರದೇಶದಿಂದ ಇತ್ತೀಚೆಗೆ ದೇಶಕ್ಕೆ ಹಿಂದಿರುಗಿರುವ ವ್ಯಕ್ತಿಯನ್ನು ಮಂಕಿಪಾಕ್ಸ್​​ ಶಂಕಿತ ಪ್ರಕರಣ ಎಂದು ಗುರುತಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆ ವ್ಯಕ್ತಿಯಲ್ಲಿ mpox ಇರುವಿಕೆಯನ್ನು ಖಚಿತಪಡಿಸಲು ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು ಪರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ಆ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ, ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರೋಟೋಕಾಲ್‌ ಪ್ರಕಾರ ಪ್ರಕರಣವನ್ನು ನಿರ್ವಹಿಸಲಾಗುತ್ತಿದೆ ಮತ್ತು ಸಂಭವನೀಯ ಮೂಲವನ್ನು ಗುರುತಿಸಲು ಮತ್ತು ದೇಶದೊಳಗಿನ ಪರಿಣಾಮವನ್ನು ನಿರ್ಣಯಿಸಲು ಸಂಪರ್ಕ ಪತ್ತೆಹಚ್ಚುವಿಕೆ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಅಂತಹ ಪ್ರತ್ಯೇಕವಾದ ಪ್ರಯಾಣ-ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ. ಯಾವುದೇ ಸಂಭಾವ್ಯ ಅಪಾಯಗಳನ್ನು ನಿರ್ವಹಿಸಲು ಮತ್ತು ತಗ್ಗಿಸಲು ಕಠಿಣಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿದೆ. ಅಲ್ಲದೆ, ಕರೊನಾ ವೈರಸ್‌ನ ಸವಾಲಿನ ನಡುವೆ ರಾಜ್ಯಗಳು ಜಾಗರೂಕರಾಗಿರಬೇಕು. ವಿಶ್ವ ಆರೋಗ್ಯ ಸಂಸ್ಥೆ (WHO) 12 ಆಫ್ರಿಕನ್ ದೇಶಗಳಲ್ಲಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ಮೂರು ವಾರಗಳ ನಂತರ ಭಾರತದಲ್ಲಿ ಶಂಕಿತ ಮಂಕಿಪಾಕ್ಸ್​​ ಪ್ರಕರಣ ಪತ್ತೆಯಾಗಿದೆ.

ಎಂಪಾಕ್ಸ್ ಸೋಂಕಿನ​​ ಲಕ್ಷಣಗಳು: ಸೋಂಕು ಬಂದ 3 ರಿಂದ 17ದಿನಗಳ ನಂತರ ಪರಿಣಾಮಗಳು ಕಾಣಿಸಿಕೊಳ್ಳುತ್ತದೆ. ಜ್ವರ, ಚರ್ಮದ ದದ್ದುಗಳು, ಉಬ್ಬಿರುವ ರಕ್ತನಾಳಗಳು, ತಲೆನೋವು, ದೇಹದ ಸೆಳೆತ, ಬೆನ್ನು ನೋವು, ಶೀತ ಮತ್ತು ಆಯಾಸ, ಕೀವು ತುಂಬಿದ ಗಾಯಗಳೂ ಮಂಕಿಪಾಕ್ಸ್​​​​ನ ಲಕ್ಷಣಗಳಾಗಿವೆ. ಚರ್ಮದ ದದ್ದುಗಳ ಜತೆಗೆ ಮುಖ್ಯವಾಗಿ ಬಾಯಿ, ಕೈ ಮತ್ತು ಕಾಲುಗಳಲ್ಲಿಯೂ ದದ್ದುಗಳು ಸಂಭವಿಸುತ್ತವೆ. ಮಂಕಿಪಾಕ್ಸ್​ ದೇಹದ ಬಾಹ್ಯ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು: ಇತ್ತೀಚೆಗೆ ವಿಶ್ವಸಂಸ್ಥೆಯು ಎಂಪಾಕ್ಸ್​​ ಸೋಂಕನ್ನು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಆದರೆ ಇದು ಹೊಸ ಕೋವಿಡ್​ ಅಲ್ಲ, ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವೈರಸ್​ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಸಹಕಾರ ಬಹಳ ಮುಖ್ಯ ಎಂದು ಹೇಳಿದೆ.

ಎಂಪಾಕ್ಸ್​ ಹರಡುವುದು ಹೇಗೆ: ಮಂಕಿಪಾಕ್ಸ್ ವೈರಸ್ ಮುಖ್ಯವಾಗಿ ಸೋಂಕಿತ ವ್ಯಕ್ತಿಯ ಗಾಯಗಳು, ದ್ರವಗಳು ಅಥವಾ ಸೋಂಕಿತ ವಸ್ತುಗಳ ನೇರ ಸಂಪರ್ಕದ ಮೂಲಕ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ, ಲೈಂಗಿಕ ಸಂಬಂಧಗಳ ಸಮಯದಲ್ಲಿಯೂ ಹರಡಬಹುದು.(ಏಜೆನ್ಸೀಸ್​​)