ನ್ಯೂಸ್

ಲಂಚಗುಳಿತನ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 77ನೇ ಸ್ಥಾನ

ನವದೆಹಲಿ: ಲಂಚುಗುಳಿತನದ ಅಪಾಯದ ಜಾಗತಿಕ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಟ್ರೇಸ್​ (TRACE) ಎಂಬ ಭ್ರಷ್ಟಾಚಾರ ವಿರೋಧಿ ಮಾನದಂಡ ರೂಪಿಸುವ ಸಂಸ್ಥೆ ಪ್ರಕಟಿಸಿದ "ಬಿಜಿನೆಸ್ ಬ್ರೈಬರಿ ರಿಸ್ಕ್ಸ್ ಆಫ್​ 2020" ಪಟ್ಟಿ ಪ್ರಕಾರ, ಭಾರತದ ಸ್ಕೋರ್ 45 ಆಗಿದೆ. ಭಾರತ ಕಳೆದ ವರ್ಷದ ಪಟ್ಟಿಯಲ್ಲಿ 48 ಸ್ಕೋರ್​ನೊಂದಿಗೆ 78ನೇ ಸ್ಥಾನದಲ್ಲಿತ್ತು.

ಈ ವರ್ಷದ ಡೇಟಾ ಪ್ರಕಾರ, 194 ರಾಷ್ಟ್ರಗಳ ಬಿಜಿನೆಸ್​ ಬ್ರೈಬರಿ ರಿಸ್ಕ್​ ಮಾಪನ ಮಾಡಲಾಗಿದೆ. ಈ ಪೈಕಿ ಉತ್ತರ ಕೊರಿಯಾ, ತುರ್ಕ್​ಮೆನಿಸ್ತಾನ್​, ಸೌತ್ ಸೂಡಾನ್​, ವೆನೆಜುವೆಲಾ, ಎರಿತ್ರಿಯಾ ಹೆಚ್ಚಿನ ವಾಣಿಜ್ಯ ಲಂಚಗುಳಿತನದ ಅಪಾಯವನ್ನು ಎದುರಿಸುತ್ತಿದೆ. ಇದೇ ವೇಳೆ, ಡೆನ್ಮಾರ್ಕ್​, ನಾರ್ವೆ, ಫಿನ್ಲೆಂಡ್, ಸ್ವೀಡನ್ ಮತ್ತು ನ್ಯೂಜಿಲೆಂಡ್​ಗಳಲ್ಲಿ ಈ ಪ್ರಮಾಣ ಕನಿಷ್ಠ ಮಟ್ಟದಲ್ಲಿದೆ.

ಸರ್ಕಾರದ ಜತೆಗಿನ ವ್ಯಾಪಾರ ಸಂವಹನ, ಲಂಚಗುಳಿತನ ತಡೆ ಕ್ರಮ ಮತ್ತು ಅನುಷ್ಠಾನ, ಸರ್ಕಾರ ಮತ್ತು ನಾಗರಿಕ ಸೇವೆಗಳಲ್ಲಿ ಪಾರದರ್ಶಕತೆ, ಮಾಧ್ಯಮಗಳ ಪಾತ್ರವೂ ಸೇರಿ ನಾಗರಿಕ ಸಮಾಜದ ಮೇಲ್ವಿಚಾರಣಾ ಸಾಮರ್ಥ್ಯಗಳೆಂಬ ನಾಲ್ಕು ಅಂಶಗಳನ್ನು ಆಧರಿಸಿ ಸ್ಕೋರ್ ನೀಡಲಾಗಿದೆ. (ಏಜೆನ್ಸೀಸ್)