ಕಠ್ಮಂಡು : ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು 7ನೇ ಭಾರತ-ನೇಪಾಳ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದರು. ನೇಪಾಳದ ವಿದೇಶಾಂಗ ಸಚಿವ ನಾರಾಯಣ್ ಪ್ರಕಾಶ್ ಸೌದ್ ಅವರೊಂದಿಗೆ ಉಭಯ ದೇಶಗಳ ನಡುವಿನ ಸಂಬಂಧ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದರು.
ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳು, ಭೂಮಿ, ರೈಲು ಮತ್ತು ವಾಯು ಸಂಪರ್ಕ ಯೋಜನೆಗಳು, ರಕ್ಷಣೆ ಮತ್ತು ಭದ್ರತೆ, ಕೃಷಿ, ಇಂಧನ, ವಿದ್ಯುತ್, ಜಲಸಂಪನ್ಮೂಲ, ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ಸಾಂಸ್ಕೃತಿಕ, ವಿನಿಮಯ ಮತ್ತು ಅಭಿವೃದ್ಧಿ ಪಾಲುದಾರಿಕೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಬಾಂಧವ್ಯ ಕುರಿತಂತೆ ವಿಸ್ತೃತವಾಗಿ ಚರ್ಚೆ ನಡೆಯಿತು ಎಂದು ಜೈಶಂಕರ್ ಅವರು ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದಿನ 10 ವರ್ಷಗಳಲ್ಲಿ ನೇಪಾಳದಿಂದ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಆಮದು ಮಾಡಿಕೊಳ್ಳುವ ಕುರಿತು ಭಾರತ ಗುರುವಾರ ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದಿಂದ ಹೂಡಿಕೆಯನ್ನು ಸೆಳೆಯಲು ನೇಪಾಳಕ್ಕೆ ಹೆಚ್ಚು ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ನೇಪಾಳದ ಸುಮಾರು 6 ಸಾವಿರ ನದಿಗಳಿಂದ ವಾರ್ಷಿಕವಾಗಿ 42 ಸಾವಿರ ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಶಕ್ತಿಯಿದೆ. ಆದರೆ ಹಣಕಾಸು, ತಾಂತ್ರಿಕತೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದಿಸಲು ನೇಪಾಳಕ್ಕೆ ಸಾಧ್ಯವಾಗಿಲ್ಲ. ವಾರ್ಷಿಕವಾಗಿ 3 ಸಾವಿರ ಮೆಗಾವ್ಯಾಟ್ ಮಾತ್ರ ಉತ್ಪಾದನೆಯಾಗುತ್ತಿದೆ.
ಅಲ್ಪಾವಧಿಯ ವಿದ್ಯುತ್ ಖರೀದಿ ಒಡಂಬಡಿಕೆ ಹೊಂದಿರುವ ಭಾರತ ನೇಪಾಳದಲ್ಲಿ ಜಲವಿದ್ಯುತ್ ಸ್ಥಾರವಗಳ ಸ್ಥಾಪನೆಗೆ ಕೋಟ್ಯಂತರ ರುಪಾಯಿ ಹೂಡಿಕೆ ಮಾಡುತ್ತಿದೆ. ನೆರೆ ರಾಷ್ಟ್ರದಲ್ಲಿ ತನ್ನ ಪ್ರಭಾವ ಉತ್ತಮಪಡಿಸಿಕೊಳ್ಳುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ.
ಚೀನಾ ಮೇಲೆ ಪ್ರಭಾವ
ತನ್ನ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಮೂಲಕ ನೇಪಾಳ ಪ್ರವೇಶ ಮಾಡಿರುವ ಚೀನಾ, ಈಗ ಅಲ್ಲಿನ ಜಲವಿದ್ಯುತ್ ವಲಯದ ಮೇಲೆ ಕಣ್ಣಿಟ್ಟಿದೆ. ವಿದೇಶಿ ನೀತಿ ಸಂಶೋಧನಾ ಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ಏಷ್ಯಾದ ಎರಡು ಪ್ರಮುಖ ಶಕ್ತಿಗಳಾದ ಚೀನಾ ಮತ್ತು ಭಾರತದ ನಡುವೆ ನೇಪಾಳವು ಅಹಿತಕರವಾಗಿ ನಿಂತಿದೆ. ನೇಪಾಳದಲ್ಲಿ ರಾಜಕೀಯ ಪ್ರಭಾವಕ್ಕಾಗಿ ಬೀಜಿಂಗ್ ಮತ್ತು ನವದೆಹಲಿ ನಡುವಿನ ದೀರ್ಘಕಾಲದ ರಾಜತಾಂತ್ರಿಕ ಪೈಪೋಟಿ ಈಗ ಹೊಸ ಗಮನವನ್ನು ಹೊಂದಿದೆ. ಇದೀಗ ಭಾರತ, ನೇಪಾಳದೊಂದಿಗೆ ವಿವಿಧ ಒಪ್ಪಂದಗಳನ್ನು ಮಾಡಿಕೊಂಡಿರುವುದರಿಂದ ಚೀನಾಗೆ ಅಸಮಾಧಾನ ಉಂಟಾಗಬಹುದು.
ಕಳೆದ ವರ್ಷ ಪ್ರಧಾನಿ ಮೋದಿ ಅವರು ನೇಪಾಳದ ಪ್ರಧಾನಿ ಪುಷ್ಪಕಮಲ್ ದಹಲ್ ಅವರು ವಿದ್ಯುತ್ ಕ್ಷೇತ್ರದಲ್ಲಿ ದೀರ್ಘಾವಧಿ ಒಪ್ಪಂದ ಹೊಂದಲು ಸಮ್ಮತಿಸಿದ್ದರು. (ಏಜೆನ್ಸೀಸ್)