ನ್ಯೂಸ್

'ನೀವು ನಿಜವಾದ ನಾಯಕಿ, ರೋಲ್ ಮಾಡೆಲ್': ಮೇಜರ್ ರಾಧಿಕಾಗೆ ಗುಟೆರೆಸ್ ಶ್ಲಾಘನೆ

ವಾಷಿಂಗ್ಟನ್​: " ನೀವು ನಿಜವಾದ ನಾಯಕಿ ಮತ್ತು ರೋಲ್ ಮಾಡೆಲ್" ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಭಾರತೀಯ ಸೇನೆಯ ಮೇಜರ್ ರಾಧಿಕಾ ಸೇನ್ ಅವರನ್ನು ಕೊಂಡಾಡಿದರು.

ವಿಶ್ವಸಂಸ್ಥೆಯಲ್ಲಿ ರಾಧಿಕಾ ಅವರಿಗೆ ವರ್ಷದ ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಪ್ರಶಸ್ತಿ ನೀಡಿ ಮಾತನಾಡಿದರು.

"ನಿಮ್ಮ ಸೇವೆಯು ವಿಶ್ವಸಂಸ್ಥೆಗೆ ನಿಜವಾದ ಕ್ರೆಡಿಟ್ ಆಗಿದೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಸ್ಥಿರೀಕರಣ ಮಿಷನ್‌ನಲ್ಲಿ ಶಾಂತಿಪಾಲಕರಾಗಿ ತಮ್ಮ ಕರ್ತವ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ಇದೆ ಎಂದು ಹೇಳಿದರು.

"ಸಶಸ್ತ್ರ ಗುಂಪುಗಳ ನೇರ ದಾಳಿಗಳು, ಕಠಿಣ ಕಾರ್ಯಾಚರಣೆ, ಪ್ರತಿಕೂಲ ಹವಾಮಾನ ಸ್ಥಿತಿಗಳು ಮತ್ತು ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಯುದ್ಧದ ಹೊಸ ಅಸ್ತ್ರಗಳ ಹೊರಹೊಮ್ಮುವಿಕೆಯ ಹೊರತಾಗಿಯೂ ನಮ್ಮ ಶಾಂತಿಪಾಲಕರು ಪರಿಶ್ರಮಪಡುತ್ತಿದ್ದಾರೆ ಎಂದು ಗುಟೆರೆಸ್ ಹೇಳಿದರು.

ಕಳೆದ ವರ್ಷ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (ಡಿಆರ್‌ಸಿ) ಇದೇ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ನಿಧನರಾದ ಭಾರತೀಯ ಸೇನಾ ವೈದ್ಯ ನಾಯಕ್ ಧನಂಜಯ್ ಕುಮಾರ್ ಸಿಂಗ್ ಅವರಿಗೆ ಸಮಾರಂಭದಲ್ಲಿ ಡಾಗ್ ಹ್ಯಾಮರ್ಸ್ಕ್‌ಜೋಲ್ಡ್ ಪದಕವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಜರ್ ರಾಧಿಕಾ ಸೇನ್, ನನ್ನ ತವರು ದೇಶವಾದ ಭಾರತದಲ್ಲಿನ ನನ್ನ ಗೌರವಾನ್ವಿತ ಸಹೋದ್ಯೋಗಿಗಳ ಪರವಾಗಿ ಪ್ರಶಸ್ತಿಯನ್ನು ವಿನಮ್ರ ಮತ್ತು ಗೌರವದಿಂದ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು.

"ಲಿಂಗ-ಸೂಕ್ಷ್ಮ ಶಾಂತಿಪಾಲನೆಯು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಹಿಳೆಯರಿಗಷ್ಟೇ ಅಲ್ಲ, ಈ ಪ್ರಶಸ್ತಿಯನ್ನು ಮುಂದೊಂದು ದಿನ ಒಬ್ಬ ಪುರುಷ ಸಹ ಪಡೆಯಬೇಕೆಂದು ಆಶಿಸುತ್ತೇನೆ ಎಂದು ಹೇಳಿದರು.

ರಾಧಿಕಾಸೇನ್ ಅವರನ್ನು 2023 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಭಾರತೀಯ ಕ್ಷಿಪ್ರ ನಿಯೋಜನೆ ಬೆಟಾಲಿಯನ್‌ನೊಂದಿಗೆ ಎಂಗೇಜ್‌ಮೆಂಟ್ ಪ್ಲಟೂನ್ ಕಮಾಂಡರ್ ಆಗಿ ನಿಯೋಜಿಸಲಾಯಿತು ಮತ್ತು ಏಪ್ರಿಲ್ 2024 ರಲ್ಲಿ ಅವರ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಾಯಿತು.

ದಕ್ಷಿಣ ಸುಡಾನ್‌ನಲ್ಲಿ ಯುಎನ್ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಮತ್ತು 2019 ರಲ್ಲಿ ಪ್ರಶಸ್ತಿಯನ್ನು ಪಡೆದ ಮೇಜರ್ ಸುಮನ್ ಗವಾನಿ ನಂತರ ಈ ಗೌರವವನ್ನು ಪಡೆದ ಎರಡನೇ ಭಾರತೀಯ ಶಾಂತಿಪಾಲಕಿ ರಾಧಿಕಾ ಅವರಾಗಿದ್ದಾರೆ.

ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿರುವ 6,063 ಭಾರತೀಯ ಸಿಬ್ಬಂದಿಗಳಲ್ಲಿ, 32 ಮಹಿಳೆಯರು ಸೇರಿದಂತೆ 1,954 ಜನರು ಸೇವೆ ಸಲ್ಲಿಸುತ್ತಿದ್ದಾರೆ.