ಅಮೆರಿಕಾದಲ್ಲಿ ಚಂಡಮಾರುತ ಎಫೆಕ್ಟ್​: 250ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

america
Published on

ವಾಷಿಂಗ್ಟನ್: ಅಮೆರಿಕಾದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಡಲ್ಲಾಸ್ ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು- ಹೋಗುವ 250ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ 500ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ವರದಿಯಾಗಿದೆ.

ಚಂಡಮಾರುತದಿಂದಾಗಿ ಟೆಕ್ಸಾಸ್‌ನತ್ತ ಬೀಸುತ್ತಿದ್ದ ಬಿರುಗಾಳಿ ಸಮೇತ ಮಳೆಯು ಡಿಎಫ್‌ಡಬ್ಲ್ಯೂನ 700ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಮೆರಿಕಾ ವಿಮಾನಯಾನ ಸಂಸ್ಥೆಯು ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಗಂಟೆಗೆ 80 ಕಿಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿಯ ರಭಸದಿಂದ ಅಮೇರಿಕನ್ ಏರ್‌ಲೈನ್ಸ್‌ ನ ವಿಮಾನವೊಂದು ಆಟಿಕೆಯಂತೆ ತಿರುಗುತ್ತಿರುವುದನ್ನು ಕಾಣಬಹುದಾಗಿದೆ.

ಹವಾಮಾನ ಪರಿಸ್ಥಿತಿಯ ಬಗ್ಗೆ ಎನ್‌ಡಬ್ಲ್ಯೂಎಸ್ ಫೋರ್ಟ್ ವರ್ತ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಡಲ್ಲಾಸ್-ಫೋರ್ಟ್ ವರ್ತ್ ಕಡೆಯಿಂದ ಪೂರ್ವ ಟೆಕ್ಸಾಸ್‌ನತ್ತ ಗಾಳಿಯು ವೇಗವಾಗಿ ಬೀಸುತ್ತಿರುವುದನ್ನು ತೋರಿಸಿದೆ. ಸುಮಾರು 3 ಸೆಂ.ಮೀ ನಷ್ಟು ಆಲಿಕಲ್ಲು ಸಹಿತ ಮಳೆ ಸುರಿದಿದೆ. ಇನ್ನೂ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿಯೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net