ನ್ಯೂಸ್

ಪಾಕ್​ ಸರ್ಕಾರದ ಮೇಲೆ ಹೆಚ್ಚಿದ ಸೇನಾ ಹಿಡಿತ

ಇಸ್ಲಾಮಾಬಾದ್: ಪಾಕಿಸ್ತಾನ ಪ್ರತ್ಯೇಕ ದೇಶವಾಗಿ ರಚನೆಯಾದಾಗಿನಿಂದ ಚುನಾಯಿತ ಸರ್ಕಾರ ಆಡಳಿತ ನಡೆಸಿರುವುದಕ್ಕಿಂತ ಸೇನಾಡಳಿತ ಅಥವಾ ಸೇನೆಯ ನಿರ್ದೇಶನದಲ್ಲೇ ಅಧಿಕಾರ ಇದ್ದದ್ದು ಹೆಚ್ಚು. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸೇನೆಯ ಅಂಕೆಯಲ್ಲೇ ಆಡಳಿತ ಇದೆ. ನೆಲಕಚ್ಚಿದ ಆರ್ಥಿಕತೆ, ಕೋವಿಡ್-19 ನಿರ್ವಹಣೆಯ ಬಗ್ಗೆ ಜನರು ಬೇಸತ್ತಿದ್ದು, ಪ್ರಧಾನಿ ಇಮ್ರಾನ್ ಖಾನ್​ರ ಜನಪ್ರಿಯತೆ ಕೂಡ ಕುಗ್ಗಿದೆ. ಇದೇ ಹೊತ್ತಿನಲ್ಲಿ ಆಡಳಿತದಲ್ಲಿ ಸೇನೆಯ ಬಿಗಿ ಹಿಡಿತ ಸಾಧಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ 12ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ಸೇನಾಧಿಕಾರಿಗಳು ಆಯಕಟ್ಟಿನ ಜಾಗದಲ್ಲಿ ಪ್ರತಿಷ್ಠಾಪಿತರಾಗಿದ್ದಾರೆ. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ, ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರ, ರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ಕಳೆದ ಎರಡು ತಿಂಗಳ ಹಿಂದೆ ಸೇನೆಯ ವ್ಯಕ್ತಿಗಳೇ ನೇಮಕವಾಗಿದ್ದಾರೆ. ಸಂಸತ್​ನಲ್ಲಿ ಪಿಟಿಐ ಪಕ್ಷ ಶೇ. 46 ಸ್ಥಾನ ಹೊಂದಿದ್ದು, ಬಹುಮತಕ್ಕೆ ಸಣ್ಣಪುಟ್ಟ ಪಕ್ಷಗಳನ್ನು ಅವಲಂಬಿಸಿದೆ. ಹೀಗಿರುವಾಗ ಅಧಿಕಾರ ಉಳಿಸಿಕೊಳ್ಳಲು ಸೇನೆಯನ್ನು ಸಂತೋಷ ವಾಗಿರಿಸಬೇಕು. ಇದಕ್ಕಾಗಿ ಅದು ಸೂಚಿಸಿದ ವ್ಯಕ್ತಿಗಳಿಗೆ ಆಯಕಟ್ಟಿನ ಜಾಗ ನೀಡಬೇಕು. ಸೇನೆಗೆ ಸೆಡ್ಡು ಹೊಡೆದರೆ ಅಥವಾ ಇಂಥ ಚಟುವಟಿಕೆ ನಡೆಯುತ್ತಿದೆ ಎಂಬ ಸಂಶಯ ಬಂದರೂ ಇಮ್ರಾನ್ ಅಧಿಕಾರಕ್ಕೆ ಕುತ್ತು ನಿಶ್ಚಿತ.

ಸೇನೆ ಕೃಪೆ ಇದ್ದರೆ ಅಧಿಕಾರ

ಪಾಕ್​ನಲ್ಲಿ ಸೇನೆಯ ಬೆಂಬಲ ಪಡೆದ ಪಕ್ಷ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬುದು ಜನಜನಿತ. 2018ರಲ್ಲಿ ಪಿಟಿಐಗೆ ಬೆನ್ನಿಗೆ ಸೇನೆ ನಿಂತಿದ್ದು ಸುಳ್ಳಲ್ಲ. ಸೇನಾ ಕೃಪಾಕಟಾಕ್ಷದಿಂದ ಗೆದ್ದರೂ ನಂತರದಲ್ಲಿ ತಮ್ಮ ಛಾಪನ್ನು ಬೆಳೆಸಿಕೊಂಡ ಪ್ರಧಾನಿಗಳು ಹೆಚ್ಚು ದಿನ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ.

2018ರ ಚುನಾವಣೆ ವೇಳೆ ಇಮ್ರಾನ್ ‘ನಯಾ ಪಾಕಿಸ್ತಾನ್’ದ ಭರವಸೆ ನೀಡಿದ್ದರು. ಆದರೆ, ಆಯಕಟ್ಟಿನ ಹುದ್ದೆಗಳಿಗೆ ನಿವೃತ್ತ ಮತ್ತು ಹಾಲಿ ಸೇವೆಯಲ್ಲಿರುವ ಮಿಲಿಟರಿ ಅಧಿಕಾರಿಗಳನ್ನು ನೇಮಿಸುತ್ತಿರುವುದನ್ನು ನೋಡಿದರೆ, ಆಡಳಿತದಲ್ಲಿ ಸೇನೆಯ ಬಹಿರಂಗ ಮತ್ತು ರಹಸ್ಯದ ಪಾತ್ರ ಬೆಳೆಯುತ್ತಲೇ ಇದೆ. ದೇಶದ ನೀತಿ- ನಿರ್ಧಾರ, ಅಭಿವೃದ್ಧಿಯಲ್ಲಿ ನಾಗರಿಕರಿಗೆ ಅವಕಾಶ ಅತ್ಯಲ್ಪ ಎಂಬುದು ಎದ್ದು ಕಾಣುತ್ತದೆ. | ಉಜೈರ್ ಯೂನಸ್ ಅಟ್ಲಾಂಟಿಕ್ ಕೌನ್ಸಿಲ್​ನ ಅನಿವಾಸಿ ಸದಸ್ಯ
ಕ್ಷೀಣ ಆರ್ಥಿಕತೆ, ಹಣದುಬ್ಬರ ಹೆಚ್ಚಳ

ಇಮ್ರಾನ್ ಖಾನ್ ಅಧಿಕಾರಕ್ಕೆ ಬರುವ ಹೊತ್ತಿಗೆ ದೇಶದ ಆರ್ಥಿಕತೆ ದೈನೇಸಿ ಸ್ಥಿತಿಯಲ್ಲಿತ್ತು. ಇದನ್ನು ಸುಧಾರಿಸಲು ಇಮ್ರಾನ್ ಹೆಣಗಾಡುತ್ತಿದ್ದಾರೆ. ಆದರೆ, ನಿರೀಕ್ಷಿತ ಫಲ ದೊರೆಯುತ್ತಿಲ್ಲ. ಹೀಗಾಗಿ ಅವರ ಜನಪ್ರಿಯತೆ ಇಳಿಮುಖವಾಗಿದೆ. ಹದಗೆಟ್ಟ ಆರ್ಥಿಕತೆಯ ಕಾರಣ ಹಣದುಬ್ಬರ (ಶೇ. 10.94) ವಿಪರೀತವಾಗಿ ಏರಿಕೆಯಾಯಿತು. ಸಾಮಾನ್ಯ ಜನರು ಬದುಕುವುದೇ ಕಷ್ಟಕರವಾಗಿ ಇಮ್ರಾನ್ ಮೇಲೆ ವಿಶ್ವಾಸ ಇರಿಸಿದ್ದವರಲ್ಲೂ ಆಕ್ರೋಶ ಉಂಟಾಗಿದೆ. ಜತೆಗೆ ಇಮ್ರಾನ್​ರ ಆಪ್ತರ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳು ಇರುವುದರಿಂದ ಜನರು ಪ್ರಧಾನಿಯನ್ನು ಗುಮಾನಿಯಿಂದಲೇ ನೋಡುವಂತಾಗಿದೆ. ಇದನ್ನೂ ಓದಿ: ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…

ಸೇನಾಧಿಕಾರಿಗಳ ಕೈಯಲ್ಲಿ ಅಧಿಕಾರ
  • ನಿವೃತ್ತ ಲೆ.ಜನರಲ್ ಅಸಿಮ್ ಸಲೀಂ ಬಜ್ವಾ- ಪ್ರಧಾನಿಯ ಸಂವಹನ ಸಲಹೆಗಾರ ಮತ್ತು ಚೀನಾದ ವಲಯ ಮತ್ತು ರಸ್ತೆ ಯೋಜನೆಯಲ್ಲಿ ಪಾಕ್ ಹೂಡಿಕೆ ಮೇಲ್ವಿಚಾರಣಾಧಿಕಾರಿ.
  • ನಯಾ ಪಾಕಿಸ್ತಾನ್ ವಸತಿ ಯೋಜನೆಯ ಕಾರ್ಯಪಡೆಗೆ ಕಳೆದ ತಿಂಗಳು ಇಬ್ಬರು ಸೇನಾಧಿಕಾರಗಳ ನೇಮಕ.
  • ಆಂತರಿಕ ಭದ್ರತಾ ಸಚಿವ ಇಜಾಜ್ ಶಾ, ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಸೇರಿ ಸಂಪುಟದಲ್ಲಿರುವ ಕನಿಷ್ಠ ಒಂದು ಡಜನ್ ಮಂತ್ರಿಗಳು ಮಾಜಿ ಅಧ್ಯಕ್ಷ ಮತ್ತು ಸೇನಾ ಡಳಿತಗಾರ ಪ್ರರ್ವೆಜ್ ಮುಷರಫ್​ಗೆ ನಿಷ್ಠರಾಗಿದ್ದವರು.
  • ಕಳೆದ ಮಾರ್ಚ್​ನಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ದೇಶದಲ್ಲಿ ಲಾಕ್​ಡೌನ್ ಘೋಷಿಸಿದ್ದು ಸರ್ಕಾರ ಅಲ್ಲ, ಸೇನೆಯ ವಕ್ತಾರ. ದೇಶದಲ್ಲಿ ಕರೊನಾ ಸ್ಥಿತಿಗತಿ ಬಗ್ಗೆ ಬಹುತೇಕ ಮಾಹಿತಿ ಬಿಡುಗಡೆ ಆಗುವುದು ಸೇನೆಯ ಮೂಲಕವೇ. ನೆಪ ಮಾತ್ರಕ್ಕೆ ಯೋಜನಾ ಸಚಿವ ಅಸಾದ್ ಉಮರ್ ಸುದ್ದಿಗೋಷ್ಠಿಯಲ್ಲಿ ಇರುತ್ತಾರಷ್ಟೆ.