ಪಾಕ್​​ನಲ್ಲಿ ಮಾಸ್ಕ್​ ಧರಿಸದೆ ಹೊರಗೆ ಬಂದರೆ ಶಾಕ್​ ಟ್ರೀಟ್​ಮೆಂಟ್​; ಸತ್ತೇ ಹೋದಷ್ಟು ನೋವು ಎಂದ ಶಿಕ್ಷೆಗೊಳಗಾದವ

Current Shock
Published on

ಇಸ್ಲಾಮಾಬಾದ್: ಇಡೀ ಜಗತ್ತಿನಲ್ಲಿ ಕರೊನಾ ತಾಂಡವವಾಡುತ್ತಿದೆ. ಜನರು ಹೊರಗಡೆ ಓಡಾಡುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್​ ಹಾಕಿಕೊಳ್ಳಬೇಕು. ಸ್ಯಾನಿಟೈಸರ್​ ಬಳಕೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬಿತ್ಯಾದಿ ನಿಯಮಗಳನ್ನು ಬಹುತೇಕ ದೇಶಗಳು ಜಾರಿಗೊಳಿಸಿವೆ. ಅದನ್ನು ಉಲ್ಲಂಘಿಸಿದವರಿಗೆ ಸಣ್ಣಪುಟ್ಟ ಶಿಕ್ಷೆಗಳನ್ನೂ ನೀಡುತ್ತಿವೆ.

ಭಾರತದಲ್ಲಿ ಮಾಸ್ಕ್​ ಧರಿಸದೆ ಹೊರಗೆ ಬರುವವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ರಸ್ತೆಯಲ್ಲಿ ಬಸ್ಕಿ ತೆಗೆಯುವಂತಹ ಶಿಕ್ಷೆಯನ್ನೂ ನೀಡುತ್ತಿದ್ದಾರೆ. ಆದರೆ ಪಾಕಿಸ್ತಾನ ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ, ಆಸ್ಪತ್ರೆಗಳಿಗೆ ಅಗತ್ಯ ಸಾಧನಗಳ ಪೂರೈಕೆ ಮಾಡುವುದರಲ್ಲಿ ಹಿಂದೆ ಬಿದ್ದಿದ್ದರೂ ಸಹ, ಮಾಸ್ಕ್​ ಧರಿಸದೆ ಹೊರಗೆ ಬರುವವರಿಗೆ ಭರ್ಜರಿ, ಭಯಾನಕ ಶಿಕ್ಷೆಯನ್ನು ನೀಡುತ್ತಿದೆ.

ಮಾಸ್ಕ್​ ಧರಿಸಿದೆ, ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮನೆಯಿಂದ ಆಚೆ ಬರುವವರಿಗೆ ಫೈಸಲಾಬಾದ್​ನ ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ನೀಡುತ್ತಿರುವ ಶಿಕ್ಷೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಯಾರೇ ಆದರೂ ಸರಿ, ಮಾಸ್ಕ್​ ಧರಿಸದೆ ಬಂದರೆ, ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸದಿದ್ದರೆ ಅಂಥವರಿಗೆ ಶಾಕ್​ ಟ್ರೀಟ್​ಮೆಂಟ್​ ಕೊಡಲಾಗುತ್ತಿದೆ. ಅದೂ ಕೂಡ ಅಧಿಕ ಆವರ್ತನದ ವಿದ್ಯುತ್​ ಸಾಧನಗಳಿಂದ ಈ ಟ್ರೀಟ್​ಮೆಂಟ್ ನೀಡಲಾಗುತ್ತಿದ್ದು. ಅತ್ಯಂತ ಭಯಾನಕವಾಗಿ ಶಿಕ್ಷೆ ನೀಡುತ್ತಿರುವ ಜಿಲ್ಲಾಡಳಿತ ಇದಾಗಿದೆ.

ಮಾಸ್ಕ್​ ಧರಿಸದ ಬೈಕ್​ ಸವಾರರು, ಆಟೋ ಚಾಲಕರು, ಸಾಮಾನ್ಯ ಜನರಿಗೆ ಹೀಗೆ ವಿದ್ಯುತ್ ಶಾಕ್​ ಟ್ರೀಟ್​ಮೆಂಟ್​ ಕೊಡುವ ವಿಡಿಯೋಗಳು ವೈರಲ್​ ಆಗಿವೆ. ಜಿಲ್ಲಾಡಳಿತದ ಇಷ್ಟು ಕಠಿಣ ಕ್ರಮವನ್ನು ಅನೇಕರು ಟೀಕಿಸಿದ್ದಾರೆ. ವೈರಲ್​ ವಿಡಿಯೋ ನೋಡಿದವರೆಲ್ಲ ಪಾಕ್​ಗೆ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದಾರೆ.

ವಿದ್ಯುತ್​ ಪ್ರವಹಿಸುವ ಸಾಧನವನ್ನಿಟ್ಟು ಶಾಕ್ ಹೊಡೆಸುತ್ತಾರೆ. ಒಂದು ಕ್ಷಣ ಸತ್ತೇ ಹೋದಷ್ಟು ನೋವಾಗುತ್ತದೆ ಎಂದು ಶಿಕ್ಷೆಗೊಳಗಾದ ಆಟೋ ಚಾಲಕ ಹೇಳಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net