ನ್ಯೂಸ್

ಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ..!

ಕಣ್ಣೂರು: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕೇರಳದ ಕಣ್ಣೂರು ಜಿಲ್ಲೆಯ ಚೆರುಪುಳದಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

ಮೃತರನ್ನು ಚೆರುಪುಳ ಮೂಲದ ಶಾಜಿ-ಶ್ರೀಜಾ ದಂಪತಿಗಳು ಹಾಗೂ ಮಕ್ಕಳಾದ ಸೂರಜ್, ಸುರಬಿ ಮತ್ತು ಸುಜಿನ್​ ಎಂದು ಗುರುತಿಸಲಾಗಿದೆ. ಶ್ರೀಜಾ ಮತ್ತು ಶಾಜಿ ಕಳೆದ ವಾರವಷ್ಟೆ ಮದುವೆಯಾಗಿದ್ದರು. ಆದರೆ ಶ್ರೀಜಾಗೆ ಈಗಾಗಲೇ ಮತ್ತೊಬ್ಬನ ಜತೆಗೆ ವಿವಾಹವಾಗಿತ್ತು. ಅವನಿಗೆ ವಿಚ್ಛೇದನ ನೀಡದೆ ಶ್ರೀಜಾ, ಈತನ ಜತೆ ವಿವಾಹವಾಗಿದ್ದಳು ಎನ್ನುವ ಆರೋಪಗಳು ಕೇಳಿ ಬಂದಿವೆ.

ದಂಪತಿಗಳು ಮೊದಲು ಮಕ್ಕಳನ್ನು ಕೊಂದ ನಂತರ ನೇಣು ಹಾಕಿಕೊಂಡಿದ್ದಾರೆ ಎಂದು ಶಂಕಿಸಿದ್ದು, ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)