ನ್ಯೂಸ್

ಈ ಪಿಯುಸಿ ವಿದ್ಯಾರ್ಥಿನಿ ತನ್ನ ತರಗತಿಯನ್ನು ಅರ್ಧಕ್ಕೇ ಬಿಟ್ಟು ಬಂದಿದ್ದು ಇಂಥ ಕಾರಣಕ್ಕಾ?

ರಾಯಚೂರು: ಇತ್ತೀಚಿನ ಕೆಲ ತಿಂಗಳುಗಳಿಂದ ಹದಿ ಹರೆಯದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕ್ಷುಲ್ಲಕ ಎಂಬಂತಹ ಕಾರಣಕ್ಕೆ ಉನ್ನತ ಭವಿಷ್ಯ ಕಾಣಬೇಕಿದ್ದ ವಿದ್ಯಾರ್ಥಿಗಳು ಜೀವನವನ್ನೇ ಕೊನೆಗಾಣಿಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ವಿದ್ಯಾರ್ಥಿನಿಯೊಬ್ಬಳು ತರಗತಿಯನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾಳೆ. ನೇರವಾಗಿ ಹಾಸ್ಟೆಲ್​ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜಿಲ್ಲೆಯ ‌ಲಿಂಗಸೂಗೂರು ಪಟ್ಟಣದ ವಿಸಿಬಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಐಶ್ವರ್ಯ (18) ನೇಣು ಹಾಕಿಕೊಂಡ ವಿದ್ಯಾರ್ಥಿನಿ. ಗೋನವಾಟ್ಲ ತಾಂಡಾದ ನಿವಾಸಿಯಾಗಿರುವ ವಿದ್ಯಾರ್ಥಿನಿ ಐಶ್ವರ್ಯ ನೇರವಾಗಿ ಹಾಸ್ಟೆಲ್​ ಕೋಣೆಗೆ ಬಂದು ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ.

ವಿದ್ಯಾರ್ಥಿನಿ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಲಿಂಗಸೂಗೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ತನಿಖೆಯಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಬಹಿರಂಗವಾಗಬೇಕಿದೆ.