ನ್ಯೂಸ್

ದೇಶದಲ್ಲಿ ದಿನಕ್ಕೊಬ್ಬ ಪೊಲೀಸ್ ಸಾವು: 427 ಅಧಿಕಾರಿ, ಸಿಬ್ಬಂದಿ ನಿಧನ; ರಾಜ್ಯದಲ್ಲಿ ಅಪಘಾತಕ್ಕೆ ನಾಲ್ವರು ಬಲಿ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ದೇಶದಲ್ಲಿ ಪ್ರತಿದಿನ ಸರಾಸರಿ ಒಬ್ಬರು ಅಥವಾ ಇಬ್ಬರು ಪೊಲೀಸರು ಕರ್ತವ್ಯದ ವೇಳೆ ಸಾವಿಗೀಡಾಗುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ವರದಿ ಪ್ರಕಾರ ದೇಶದಲ್ಲಿ 2021ರಲ್ಲಿ ವಿವಿಧ ದರ್ಜೆಯ 427 ಅಧಿಕಾರಿ, ಸಿಬ್ಬಂದಿ ಮೃತಪಟ್ಟಿದ್ದರೆ, 1,632 ಮಂದಿ ಗಾಯಗೊಂಡಿದ್ದಾರೆ.

ಹೆಚ್ಚಾಗಿ ರಸ್ತೆ ಅಪಘಾತದಿಂದ (339 ಮಂದಿ) ಅಸುನೀಗಿದ್ದು, 372 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ ನಾಲ್ವರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಗಲಭೆಯಲ್ಲಿ 14 ಮತ್ತು 28 ಮಂದಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಹಾಗೂ 25 ಮಂದಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಎನ್​ಸಿಆರ್​ಬಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಮಿಳುನಾಡಿನಲ್ಲಿ (58) ಅತಿ ಹೆಚ್ಚು ಅಧಿಕಾರಿಗಳು ಸಾವಿಗೀಡಾಗಿದ್ದಾರೆ. ಆನಂತರದ ಸ್ಥಾನದಲ್ಲಿ ಛತ್ತಿಸ್​ಗಢ (47), ಬಿಹಾರ (39), ರಾಜಸ್ಥಾನ 36), ಮಧ್ಯಪ್ರದೇಶ (32) ಮತ್ತು ಉತ್ತರ ಪ್ರದೇಶ (33) ರಾಜ್ಯಗಳು ಇವೆ. 233 ಕಾನ್​ಸ್ಟೆಬಲ್​ಗಳು, 100 ಹೆಡ್ ಕಾನ್​ಸ್ಟೆಬಲ್, 41 ಎಎಸ್​ಐ, 32 ಪಿಎಸ್​ಐ, 8 ಇನ್​ಸ್ಪೆಕ್ಟರ್, 2 ಗೆಜೆಟೆಡ್ ಅಧಿಕಾರಿ ಮತ್ತು 11 ಇತರ ಸಿಬ್ಬಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರ ಪಟ್ಟಿಯಲ್ಲಿಯೂ ಸಹ ಕಾನ್​ಸ್ಟೆಬಲ್​ಗಳೇ (951) ಹೆಚ್ಚಾಗಿದ್ದಾರೆ. ಆನಂತರ ಹೆಡ್ ಕಾನ್​ಸ್ಟೆಬಲ್ (238), ಎಎಸ್​ಐ-106, ಪಿಎಸ್​ಐ-202, ಇನ್​ಸ್ಪೆಕ್ಟರ್-44 ಸೇರಿದ್ದಾರೆ ಎಂದು ಎನ್​ಸಿಆರ್​ಬಿ ವರದಿಯಲ್ಲಿ ಬೆಳಕಿಗೆ ಬಂದಿದೆ.

ಟೆರರ್ ಕಾರ್ಯಾಚರಣೆ 18 ಮಂದಿ ಹುತಾತ್ಮ: ಭಯೋತ್ಪಾದಕ ಮತ್ತು ಜಿಹಾದಿ ವಿರುದ್ಧದ ಕಾರ್ಯಾಚರಣೆ 18 ಪೊಲೀಸರು ಹುತಾತ್ಮರಾಗಿದ್ದಾರೆ. ಈ ಎಲ್ಲರೂ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಗೆ ಸೇರಿದವರು. ನಕ್ಸಲ್ ಮತ್ತಿತರರ ವಿರುದ್ಧದ ಕಾಯಾಚರಣೆ ವೇಳೆ 40, ಗಡಿಭಾಗದ ಗುಂಡಿನ ದಾಳಿ ಮತ್ತು ಗ್ಯಾಂಗ್ ಸ್ಟಾರ್​ಗಳ ವಿರುದ್ಧದ ಹೋರಾಟದಲ್ಲಿ ತಲಾ 11 ಮಂದಿ ಮೃತಪಟ್ಟಿದ್ದಾರೆ.

ಖಾಕಿಗೆ 22 ನಾಗರಿಕರು ಸಾವು: ದೇಶದಲ್ಲಿ ನಡೆಯುವ ಪೊಲೀಸರ ಕಾರ್ಯಾಚರಣೆ ವೇಳೆ ಆಕಸ್ಮಿಕವಾಗಿ ಗುಂಡು ತಗಲಿ ಅಥವಾ ಲಾಠಿ ಹಲ್ಲೆಯಿಂದ 22 ನಾಗರಿಕರು ಬಲಿಯಾಗಿದ್ದಾರೆ.