ಬೆಂಗಳೂರು: ಐಟಿ-ಬಿಟಿ, ನವೋದ್ಯಮದ ನಂತರ ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಬ್ಲಾಕ್ಚೈನ್ ಮುಂತಾದ ಉದಯೋನ್ಮುಖ ತಂತ್ರಜ್ಞಾನದತ್ತ ಕರ್ನಾಟಕ ದಾಪುಗಾಲಿಟ್ಟಿದೆ (Jobs Created). ಈ ನಿಟ್ಟಿನಲ್ಲಿ ಮತ್ತಷ್ಟು ವೇಗ ನೀಡಲು ಉದ್ದೇಶಿತ ‘ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ 2024-29’ (ಜಿಸಿಸಿ ಪಾಲಿಸಿ) ಅನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಬಿಡುಗಡೆ ಮಾಡಿದರು.
ಮುಂದಿನ ಐದು ವರ್ಷಗಳಲ್ಲಿ ಹೊಸದಾಗಿ 500 ಜಿಸಿಸಿಗಳನ್ನು ಆಕರ್ಷಿಸಿ, 3.50 ದಶಲಕ್ಷ ಉದ್ಯೋಗಗಳು ಹಾಗೂ 50 ದಶಲಕ್ಷ ಅಮೆರಿಕ ಡಾಲರ್ (ಅಂದಾಜು 42 ಸಾವಿರ ಕೋಟಿ ರೂ.) ಆರ್ಥಿಕತೆ ಸೃಷ್ಟಿಸುವುದು ನೀತಿಯ ಗುರಿಯಾಗಿದೆ. ಜಿಸಿಸಿಗಳಿಗೆ ಕ್ರಿಯಾತ್ಮಕ, ಸುಗಮ ವ್ಯವಹಾರ ಪರಿಸರ ಬೆಳೆಸುವ ರಾಜ್ಯದ ಬದ್ಧತೆಯನ್ನು ನೀತಿ ಪುನರುಚ್ಚರಿಸಿದೆ. ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು, ಸ್ಥಳೀಯ ನಾವೀನ್ಯತೆ ಪರಿಸರ ವ್ಯವಸ್ಥೆಯೊಂದಿಗೆ ತಡೆಹಿರತ ಸಹಯೋಗಕ್ಕೆ ಉತ್ತೇಜನ ಆಶಯ ಹೊಂದಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಂಶೋಧನೆ ಅಭಿವೃದ್ಧಿಯಲ್ಲಿ ವಿಶ್ವಮಟ್ಟದಲ್ಲಿ ಕರ್ನಾಟಕ ಮುಂದಾಳುವಾಗಿ ಹೊರಹೊಮ್ಮುವ ರೀತಿಯಲ್ಲಿ ಈ ನೀತಿ ರೂಪುಗೊಂಡಿದೆ. ರಾಷ್ಟ್ರೀಯ ಜಿಸಿಸಿ ಮಾರುಕಟ್ಟೆಯಲ್ಲಿ ಕರ್ನಾಟಕ ಅರ್ಧದಷ್ಟು ಪಾಲು ಹೊಂದುವ ನಿರೀಕ್ಷೆಯಿದೆ ಎಂದು ಹೇಳಿದರು.
ಬೆಂಗಳೂರಿನಾಚೆಗೂ ಆದ್ಯತೆ: ಪ್ರತಿಭಾ ಸಂಪತ್ತು, ಅಗತ್ಯ ಸವಲತ್ತುಗಳ ಸಮರ್ಪಕ ಬಳಕೆ, ಆರ್ಥಿಕತೆ ವೃದ್ಧಿ ಲಾಭ ಸಮನಾಗಿ ಹಂಚಿಕೆ, ಅಭಿವೃದ್ಧಿಯಲ್ಲಿ ಸಮತೋಲನ ದೃಷ್ಟಿಕೋನದ ಬೆಂಗಳೂರಿನಾಚೆ ಉಪಕ್ರಮಕ್ಕೂ ಈ ನೀತಿ ಆದ್ಯತೆ ನೀಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ‘ಬಿಯಾಂಡ್ ಬೆಂಗಳೂರು ಪ್ಯಾಕೇಜ್’ ಮುಖೇನ ಹೂಡಿಕೆ ಆಕರ್ಷಣೆ, ನಾವೀನ್ಯತೆಗೆ ಉತ್ತೇಜಿಸಲು ಜಾಗತಿನ ನಾವೀನ್ಯತೆ ಜಿಲ್ಲೆಗಳ ಸ್ಥಾಪನೆ ಸೇರಿ ಇಡೀ ರಾಜ್ಯ ಅಭಿವೃದ್ಧಿ ಗುರಿಯಿದೆ. ಆ ಮೂಲಕ 2030ರ ವೇಳೆಗೆ ರಾಜ್ಯದ ಒಂದು ಟ್ರಿಲಿಯನ್ ಅಮೆರಿಕ ಡಾಲರ್ ಆರ್ಥಿಕ ಸಾಧಿಸಲು ಗಮನಾರ್ಹ ಪಾಲು ನೀಡಬೇಕೆಂಬ ಹಂಬಲವಿದೆ ಎಂದರು.
ಉದ್ಯಮಗಳೇ ಮುಂಚೂಣಿ: ಉದ್ಯಮಿಗಳಿಗೆ ಪ್ರೋತ್ಸಾಹಕ, ಅಗತ್ಯ ಸವಲತ್ತು ಕಲ್ಪಿಸುವುದಕ್ಕೆ ನೀತಿ ಸೀಮಿತವಾಗಿಲ್ಲ. ಹೂಡಿಕೆಗೆ ಮುಂದೆ ಬರುವ ಉದ್ಯಮಗಳು ಮುಂಚೂಣಿಯಲ್ಲಿ ನಿಲ್ಲಲು, ಯೋಜನೆ ಅನುಷ್ಠಾನಕ್ಕೆ ಸರ್ಕಾರ ಒತ್ತಾಸೆ ನೀಡುವುದು ನೀತಿಯ ಪ್ರಮುಖಾಂಶವಾಗಿದೆ ಎಂದು ತಿಳಿಸಿದರು. ಕರ್ನಾಟಕ 2030ರ ವೇಳೆಗೆ ವಿಶ್ವದ ಅಗ್ರ ಫೋರ್ಬ್ಸ್ ಎರಡು ಸಾವಿರ ಉದ್ಯಮಿಗಳ ಪೈಕಿ 330ಕ್ಕಿಂತ (ಶೇ.15) ಹೆಚ್ಚು ಉದ್ಯಮಗಳಿಗೆ ನೆಲೆ ಒದಗಿಸಿ ಅಮೆರಿಕ, ಯೂರೋಪ್ ಮಾತ್ರವಲ್ಲ ಜಗತ್ತಿನ ವಿನೂತನ ಜಿಸಿಸಿಗಳನ್ನು ರಾಜ್ಯಕ್ಕೆ ಕರೆತರುವುದು ನೀತಿಯ ದಿಕ್ಸೂಚಿ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಬೆಂಗಳೂರುಗಳನ್ನು ಸೃಷ್ಟಿಸುವುದಲ್ಲ. ರಾಜ್ಯದ ಎರಡು ಮತ್ತು 3ನೇ ದರ್ಜೆ ನಗರಗಳಲ್ಲಿ ಲಭ್ಯ ಸಂಪನ್ಮೂಲ, ಸಾಮರ್ಥ್ಯ, ಪ್ರತಿಭಾ ಸಂಪತ್ತು ಪರಿಣಾಮಕಾರಿ ಬಳಕೆ, ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವುದು ‘ಬೆಂಗಳೂರಿನಾಚೆ ಉಪಕ್ರಮ’ದ ಆದ್ಯತೆಯಾಗಿದೆ ಎಂದು ಶಾಸಕ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದರು. ಮೈಸೂರಿನಲ್ಲಿ ಸೆಮಿಕಂಡಕ್ಟರ್, ಕಲಬುರಗಿಯಲ್ಲಿ ಆಟೋ ಮೊಬೈಲ್, ಹೆಲ್ತ್ ಟೆಕ್, ಮಂಗಳೂರಿನಲ್ಲಿ ತಂತ್ರಜ್ಞಾನ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಬಿಡಿಭಾಗಗಳು, ಉಪಕರಣ ಹೀಗೆ ಆಯಾ ಪ್ರದೇಶದ ಸಾಮರ್ಥ್ಯ, ಸಂಪನ್ಮೂಲ ಬಳಕೆಗೆ ಒತ್ತು ನೀಡಲಾಗಿದೆ. ಮಂಗಳೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪಿಸಲು ಕಿಯೋನಿಕ್ಸ್ ತೀರ್ವನಿಸಿದ್ದು, 4 ಎಕರೆ ಜಮೀನು ಗುರುತಿಸಿ ಕ್ರಮವಹಿಸಲಾಗಿದೆ ಎಂದರು.
ಮುಖ್ಯಾಂಶಗಳು