

ಕಾನ್ಪುರ: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಹಂಬಲದಲ್ಲಿರುವ ಭಾರತ ತಂಡ ಹಾಗೂ ಪ್ರವಾಸಿ ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಹವಾಮಾನ ವೈಪರೀತ್ಯ ಸಮಸ್ಯೆ ಎದುರಾಗಿದ್ದು. ಮೊದಲ ದಿನ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು.
ವೇಗಿ ಆಕಾಶ್ ದೀಪ್ (34ಕ್ಕೆ 2) ಬಿಗಿ ದಾಳಿಯ ಮೂಲಕ ಆರಂಭಿಕ ಕಡಿವಾಣ ಹೇರಿದರೆ, ಬಳಿಕ ಮಾಮಿನುಲ್ ಹಕ್ (40* ರನ್, 81 ಎಸೆತ, 7 ಬೌಂಡರಿ) ಹಾಗೂ ನಾಯಕ ನಜ್ಮೂಲ್ ಹೊಸೈನ್ ಶಾಂಟೋ (31 ರನ್, 57 ಎಸೆತ, 6 ಬೌಂಡರಿ) ಜತೆಯಾಟದ ನೆರವಿನಿಂದ ಬಾಂಗ್ಲಾದೇಶ ಚೇತರಿಸಿಕೊಂಡಿದೆ. ಪಂದ್ಯದ 2 ಮತ್ತು 3ನೇ ದಿನವೂ ಮಳೆ ಅಡಚಣೆಯ ಭೀತಿ ಕಾಡುತ್ತಿದೆ.
ಕುಂಬ್ಳೆ ದಾಖಲೆ ಹಿಂದಿಕ್ಕಿದ ಅಶ್ವಿನ್: ಹಿರಿಯ ಆ್ ಸ್ಪಿನ್ನರ್ ಆರ್.ಅಶ್ವಿನ್ ಏಷ್ಯಾದಲ್ಲಿ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಹಾಗೂ ಒಟ್ಟಾರೆ 2ನೇ ಬೌಲರ್ ಎನಿಸಿದ್ದಾರೆ. ನಜ್ಮೂಲ್ ಹೊಸೈನ್ ವಿಕೆಟ್ ಪಡೆಯುವ ಮೂಲಕ ಏಷ್ಯಾದಲ್ಲಿ 420 ವಿಕೆಟ್ ಕಬಳಿಸಿದ ಅಶ್ವಿನ್, ಕನ್ನಡಿಗ ಅನಿಲ್ ಕುಂಬ್ಳೆ (419) ಅವರನ್ನು ಹಿಂದಿಕ್ಕಿದರು. ಇದುವರೆಗೆ ಅಶ್ವಿನ್ 102 ಟೆಸ್ಟ್‌ಗಳಲ್ಲಿ 523 ವಿಕೆಟ್ ಉರುಳಿಸಿದ್ದಾರೆ. ಏಷ್ಯಾದಲ್ಲಿ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯು ಮುರಳೀಧರನ್ (612) ಅಗ್ರಸ್ಥಾನದಲ್ಲಿದ್ದಾರೆ.