ನ್ಯೂಸ್

ಇಂದಿನಿಂದ ಮೂರು ದಿನಗಳ ಕಾಲ ಈ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ! ಐಎಂಡಿ ಮುನ್ಸೂಚನೆ

ಹೈದರಾಬಾದ್: ದೇಶದ ಹಲವು ಭಾಗಗಳಲ್ಲಿ ಬೇಸಿಗೆಯ ಕಾವು ತೀವ್ರವಾಗಿದ್ದು, ಜನರು ಮನೆಯಿಂದ ಹೊರಬರಲು ಚಿಂತೆಗೀಡಾಗಿದ್ದಾರೆ. ಬಿರು ಬಿಸಿಲ ತಾಪ ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದ್ದಂತೆ ಇದೀಗ ಕೆಲವೆಡೆ ವರ್ಷದ ಮೊದಲ ಮಳೆಯಾಗುತ್ತಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಈಗಾಗಲೇ ಒಂದು ಸುತ್ತು ಮಳೆ ಸುರಿದಿದೆ. ತೆಲಂಗಾಣದಲ್ಲಿ ಸಹ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿರುವ ಐಎಂಡಿ, ತೆಲಂಗಾಣದಲ್ಲಿ ಇಂದು ಬೆಳಗ್ಗೆಯಿಂದಲೇ ಕಾರ್ಮೋಡ ವಾತಾವರಣವಿರಲಿದೆ ಎಂದು ತಿಳಿಸಿದೆ. ಹೈದರಾಬಾದ್‌ನಲ್ಲಿ ಬುಧವಾರದವರೆಗೆ ಮೋಡ ಕವಿದ ವಾತಾವರಣವಿದ್ದು, ಜೋರು ಮಳೆ ಸುರಿಯುವ ಮುನ್ಸೂಚನೆ ಇದೆ ಎಂದು ವರದಿಯಾಗಿದೆ. ಇಂದು ಮುಂಜಾನೆ ನಗರದಲ್ಲಿ ಮಳೆಯ ಪ್ರಮಾಣ ದಾಖಲಾಗಿದ್ದು, ಬೇಸಿಗೆಯ ಬೇಗೆಯಿಂದ ತತ್ತರಿಸಿರುವ ನಿವಾಸಿಗಳಿಗೆ ನೆಮ್ಮದಿ ತಂದಂತಾಗಿದೆ.

ವರದಿ ಪ್ರಕಾರ, ನಗರದಲ್ಲಿ ಇಂದು ಎಲ್ಲಾ ಆರು ವಲಯಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ತೆಲಂಗಾಣಕ್ಕೆ ಈಗಾಗಲೇ ಮುನ್ಸೂಚನೆ ಸಿಕ್ಕಿದ್ದು, ರಾಜ್ಯದಲ್ಲಿ ಗುಡುಗು, ಮಿಂಚು, ಚಂಡಮಾರುತ ಮತ್ತು ಆಲಿಕಲ್ಲು ಮಳೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದೆ,(ಏಜೆನ್ಸೀಸ್).