ತಮಿಳುನಾಡು: ಭಾರತೀಯ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ, ಸಂಗೀತಗಾರ ಇಳಯರಾಜ ಅವರು ಇದೀಗ ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಅವರ ಮುಂಬರುವ 'ಕೂಲಿ' ಚಿತ್ರತಂಡಕ್ಕೆ ಲೀಗಲ್ ನೋಟಿಸ್ ರವಾನಿಸಿದ್ದಾರೆ. 1983ರ ತೆರೆಕಂಡ 'ತಂಗಾ ಮಾಗನ್' ಸಿನಿಮಾದ ಹಾಡೊಂದನ್ನು ತಮ್ಮ ಅನುಮತಿ ಇಲ್ಲದೆ, ಗಮನಕ್ಕೆ ತರದೆ ಬಳಸಿಕೊಂಡ ಹಿನ್ನೆಲೆ ನೋಟಿಸ್ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಪ್ರಜ್ವಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ
ಸನ್ ಪಿಕ್ಚರ್ಸ್ಗೆ ನೋಟಿಸ್ ನೀಡಿರುವ ಇಳಯರಾಜ, 'ಕೂಲಿ' ಚಿತ್ರತಂಡವು 1983ರಲ್ಲಿ ರಿಲೀಸ್ ಆದ 'ತಂಗಾ ಮಾಗನ್' ಸಿನಿಮಾದಿಂದ 'ವಾ..ವಾ..ಪಕ್ಕಂ ವಾ' ಹಾಡನ್ನು ನಮ್ಮ ಅನುಮತಿ ಪಡೆಯದೆ, ಅರಿವಿಗೆ ಬಾರದಂತೆ ಬಳಸಿಕೊಂಡಿರುವುದು ಸರಿಯಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನೋಟಿಸ್ನಲ್ಲಿ ನಮೂದಿಸಲಾದ ವಿಷಯ ಈ ಕೆಳಕಂಡಂತಿದೆ.
"ನಮ್ಮ ದೂರುದಾರರು ಭಾರೀ ಅಚ್ಚರಿ, ಆಘಾತಕ್ಕೊಳಗಾಗಿದ್ದು, ಯಾವುದೇ ಅನುಮತಿ ಇಲ್ಲದೆ, ನಮ್ಮ ತಂಡದವರ ಗಮನಕ್ಕೆ ತರದೆ ಹಾಡಿನ ಕೆಲಸಗಳನ್ನು ಬಳಸಿಕೊಂಡಿರುವುದು ತಪ್ಪು. ಈ ವಿಚಾರಕ್ಕೆ ನಮ್ಮ ಅಸಮಾಧಾನ ಇದೆ. ಹಾಗಾಗಿ, ಈ ನೋಟಿಸ್ ರವಾನಿಸುತ್ತಿದ್ದೇವೆ" ಎಂದು ಲೀಗಲ್ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ರಜನಿಕಾಂತ್ ಅಭಿಮಾನಿಗಳು ಶಾಕ್ ಆಗಿದ್ದಾರೆ,(ಏಜೆನ್ಸೀಸ್).