ಕತಿಹಾರ್: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಕೇಂದ್ರ ಸರ್ಕಾರ ತಂದಿರುವ ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ ಎಂದು ಭಾನುವಾರ(ಅ. 26) ಆರ್‌ಜೆಡಿ ನಾಯಕ ಮತ್ತು ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ.
ಮುಸ್ಲಿಂ ಪ್ರಾಬಲ್ಯದ ಕತಿಹಾರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ತಂದೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ದೇಶದಲ್ಲಿನ ಕೋಮು ಶಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾವಾಗಲೂ ಅಂತಹ ಶಕ್ತಿಗಳನ್ನು ಬೆಂಬಲಿಸಿದ್ದಾರೆ. ಅವರ ಕಾರಣದಿಂದಾಗಿ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೋಮು ದ್ವೇಷವನ್ನು ಹರಡುತ್ತಿವೆ. ಬಿಜೆಪಿಯನ್ನು 'ಭಾರತ್ ಜಲೋ ಪಾರ್ಟಿ' ಎಂದು ಕರೆಯಬೇಕು. ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ನಾವು ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನರು 20 ವರ್ಷಗಳ ನಿತೀಶ್ ಕುಮಾರ್ ಸರ್ಕಾರದಿಂದ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಅವರಿಗೆ ಬುದ್ಧಿ ಬಂದಿಲ್ಲ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸೀಮಾಂಚಲ್ ಪ್ರದೇಶದ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರ ಏನನ್ನೂ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ, ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಗಾಗಿ ಸೀಮಾಂಚಲ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸುತ್ತೇವೆ ಎಂದು ಯಾದವ್ ಹೇಳಿದ್ದಾರೆ.
ಪುರ್ನಿಯಾ, ಅರಾರಿಯಾ, ಕಿಷ್ಣಗಂಜ್ ಹಾಗೂ ಕತಿಹಾರ್ ಜಿಲ್ಲೆಗಳನ್ನು ಒಳಗೊಂಡಿರುವ ಈ ಪ್ರದೇಶವು ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಏಪ್ರಿಲ್‌ನಲ್ಲಿ ಸಂಸತ್ತು ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿತು. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಈ ಕಾನೂನನ್ನು ಹಿಂದುಳಿದ ಮುಸ್ಲಿಮರು ಮತ್ತು ಸಮುದಾಯದ ಮಹಿಳೆಯರ ಪಾರದರ್ಶಕತೆ ಮತ್ತು ಸಬಲೀಕರಣಕ್ಕೆ ಒಂದು ಶಕ್ತಿ ಎಂದು ಬಣ್ಣಿಸಿದ್ರೆ, ವಿರೋಧ ಪಕ್ಷಗಳು ಇದು ಮುಸ್ಲಿಮರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿವೆ. (ಏಜೆನ್ಸೀಸ್)