ನ್ಯೂಸ್

ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸ್ಮರಣೆ

ಕತಾರ್​: ಭಾರತೀಯ ಸಾಂಸ್ಕೃತಿಕ ಕೇಂದ್ರ (ಇಂಡಿಯನ್ ಕಲ್ಚರಲ್ ಸೆಂಟರ್​-ಐಸಿಸಿ)ದ ವಿದ್ಯಾರ್ಥಿ ವೇದಿಕೆಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಏ. 14ರ ಗುರುವಾರ ಹಮ್ಮಿಕೊಂಡಿದ್ದ 'ಆಜಾದಿ ಕಾ ಅಮೃತ್ ಮಹೋತ್ಸವ್' ಸಮಾರಂಭದಲ್ಲಿ ಭಾರತ ರತ್ನ ಡಾ.ಬಿ.ಆರ್​. ಅಂಬೇಡ್ಕರ್ ಅವರನ್ನು ಸ್ಮರಿಸಲಾಯಿತು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ 131ನೇ ಜಯಂತಿಯನ್ನೂ ಆಚರಿಸಲಾಯಿತು.

ಫಸ್ಟ್ ಸೆಕ್ರೆಟರಿ ಕ್ಸೇವಿಯರ್ ಧನರಾಜ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಎಲ್ಲ ಸಮಸ್ಯೆಗಳ ನಡುವೆಯೂ ಅಂಬೇಡ್ಕರ್ ಹೇಗೆ ಶಿಕ್ಷಣವೊಂದನ್ನೇ ಆಯುಧವಾಗಿ ಬಳಸಿಕೊಂಡು ಸಾಧನೆ ಮಾಡಿದರು ಎಂಬುದನ್ನು ವಿವರಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣ ಅತಿಶ್ರೇಷ್ಠವಾದುದು, ಸಮಾಜದ ಎಲ್ಲ ಸ್ತರಗಳಲ್ಲೂ ಅದಕ್ಕೆ ಗೌರವ ಸಿಕ್ಕೇ ಸಿಗುತ್ತದೆ ಎನ್ನುತ್ತ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಐಸಿಸಿಯ ಸಾಂಸ್ಕೃತಿಕ ಮುಖಸ್ಥೆ ಶ್ವೇತಾ ಕೋಷ್ಠಿ ಅವರು ಸ್ವಾಗತಿಸಿದರು. ಕತಾರ್ ಹಾಗೂ ಭಾರತದ ರಾಷ್ಟ್ರಗೀತೆ ಗಾಯನ ಸ್ಪರ್ಧೆಯಲ್ಲಿ ಮಕ್ಕಳು ಭಾಗಿಯಾಗಿದ್ದು, ಸಮೀರ್ ಮೂಸ ಅವರ ರಚನೆ ಹಾಗೂ ಧ್ವನಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಕ್ಷ್ಯಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸ್ತುತಿ ಪಡಿಸಲಾಯಿತು.

ಸಮೃದ್ಧಿ ಪನ್ವಾರ್, ವರ್ಣಿಕ ಅಳಗಪ್ಪನ್, ಹರಿಪ್ರಿಯಾ ಬಿಲ್ಲವ, ಜೈ ಆಸ್ವಿನ್, ಆಶ್ಲೇ ಹೇಮಂತ್, ಯಯಾತಿ ದತ್ತ, ಜೆಸ್ಸಿಕಾ ಮೀಕಾದೇವಕುಮಾರ್, ಭವ್ಯಾ ಜೈನ್, ಮೀನಾ ಮುಖೇಶ್, ಸಾಯಿ ತೇನಪ್ಪನ್, ಶ್ರಿಯಾ ಪಾಟೀಲ್, ಮೊಹಮ್ಮದ್ ಝೇನ್, ಮಹಿ ಶ್ರೀವತ್ಸ, ತನಿಷಿ ಥಾಪಾ, ಸುಬೋಧಿಧರ ರಾಜ್​, ಸುನಂದಿತ, ಸಿದ್ದೇಶ್ ಬಂಡಾಷೆ, ಅಫ್ತಾಬ್ ಬಷೀರ್, ಹಿಮಾನಿ ರಾವ್ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಹೆಡ್​ ಆಫ್​ ಆ್ಯಕ್ಟಿವಿಟಿ ಕೋ-ಆರ್ಡಿನೇಟರ್ ಆ್ಯಂಡ್ ಎಜುಕೇಷನ್ ಕಮಲಾ ಠಾಕೂರ್ ಅವರು ಕಾರ್ಯಕ್ರಮ ಸಮನ್ವಯಗೊಳಿಸಿದ್ದು, ಐಸಿಸಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಜಿ.ಎಸ್.ಕೃಷ್ಣಕುಮಾರ್ ಮುಂತಾದವರು ಮತ್ತು ಶಾಲಾ ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಆಯೇಷಾ ಫಾತಿಮಾ ನಿರೂಪಣೆ ಮಾಡಿದ್ದು, ಜೆ.ಪಿ. ಪವಿತ್ರಾ ಅತಿಥಿಗಳನ್ನು ಸ್ವಾಗತಿಸಿದರೆ, ಹಿಮಾನಿ ರಾವ್ ವಂದನಾರ್ಪಣೆ ಮಾಡಿದರು.