ನ್ಯೂಸ್

ಬಿಡಿಎ ಅಧ್ಯಕ್ಷರಾಗಿ ಐಎಎಸ್​ ಅಧಿಕಾರಿ ರಾಕೇಶ್​ ಸಿಂಗ್​ ನೇಮಕ: ಬೆಂಗಳೂರು ಶಾಸಕರಿಗೆ ನಿರಾಸೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಬೆನ್ನಲ್ಲೇ ಹಿರಿಯ ಐಎಎಸ್​ ಅಧಿಕಾರಿ ರಾಕೇಶ್​ ಸಿಂಗ್​ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಇಂದು (ಜೂ.8) ಆದೇಶ ಹೊರಡಿಸಿದೆ.

ರಾಕೇಶ್​ ಸಿಂಗ್​ ನೇಮಕ ಬೆನ್ನಲ್ಲೇ ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬೆಂಗಳೂರು ಕಾಂಗ್ರೆಸ್​ ಶಾಸಕರಿಗೆ ಭಾರೀ ನಿರಾಸೆ ಆಗಿದೆ. ಶಾಂತಿನಗರದ ಕಾಂಗ್ರೆಸ್​ ಶಾಸಕ ಎನ್‌.ಎ. ಹ್ಯಾರಿಸ್ ಹಾಗೂ ಗೋವಿಂದರಾಜನಗರದ ಕಾಂಗ್ರೆಸ್​ ಶಾಸಕ ಪ್ರಿಯಾಕೃಷ್ಣ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇಬ್ಬರಿಗೂ ಸಚಿವ ಸ್ಥಾನ ಮಿಸ್ ಆದ ಹಿನ್ನಲೆಯಲ್ಲಿ ಬಿಡಿಎ ಸ್ಥಾನ ಪಡೆಯುವುದಕ್ಕಾಗಿ ತೀವ್ರ ಲಾಬಿ ನಡೆಸಿದ್ದರು. ಆದರೆ, ಅಂತಿಮವಾಗಿ ಸರ್ಕಾರ ಐಎಎಸ್​ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಕುತೂಹಲಕ್ಕೆ ತೆರೆಎಳೆದಿದೆ.

ಪ್ರಿಯಾಕೃಷ್ಣ ಟ್ವೀಟ್​

ಈ ಹಿಂದೆ ಪ್ರಿಯಾಕೃಷ್ಣ ಅವರು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದರು. ನಾನು ಗೋವಿಂದರಾಜನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಬಿಜಿಯಾಗಿದ್ದೇನೆ. ನಾನು ಯಾವುದೇ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದರು. ಆದರೂ, ಒಳಗೊಳಗೆ ಪ್ರಿಯಾಕೃಷ್ಣ ಲಾಬಿ ಮಾಡುತ್ತಿದ್ದಾರೆ ಎಂದು ತಿಳಿಬಂದಿತ್ತು. ಇದೀಗ ಬಿಡಿಎ ಸ್ಥಾನ ಮಿಸ್​ ಆಗಿರುವುದು ಪ್ರಿಯಾಕೃಷ್ಣ ಮತ್ತು ಹ್ಯಾರಿಸ್​ಗೆ ಬೇಸರ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.

ರಾಕೇಶ್​ ಸಿಂಗ್​ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾತ್ರವಲ್ಲದೆ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಮತ್ತು ಈ ಕೆಳಕಂಡ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನಾಗಿಯೂ ನೇಮ ಮಾಡಲಾಗಿದೆ.

1. ಆನೇಕಲ್ ಯೋಜನಾ ಪ್ರಾಧಿಕಾರ

2. ಹೊಸಕೋಟೆ ಯೋಜನಾ ಪ್ರಾಧಿಕಾರ

3. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ

4. ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ

5. ಮಾಗಡಿ ಯೋಜನಾ ಪ್ರಾಧಿಕಾರ

6. ಚನ್ನಪಟ್ಟಣ ಯೋಜನಾ ಪ್ರಾಧಿಕಾರ

7. ಕನಕಪುರ ಯೋಜನಾ ಪ್ರಾಧಿಕಾರ

8. ನೆಲಮಂಗಲ ಯೋಜನಾ ಪ್ರಾಧಿಕಾರ

9. ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ

10. ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ ಸಿಟಿ ಯೋಜನಾ ಪ್ರಾಧಿಕಾರ