ನ್ಯೂಸ್

ಕುಕ್ಕರ್​ನಲ್ಲಿ ಪತ್ನಿ ದೇಹದ ಮಾಂಸ! ಸಾಕ್ಷಿ ಸಿಗದ ಕೇಸ್​ಗೆ ಕಡೆಗೂ ಸಿಕ್ಕಿತು ಟ್ವಿಸ್ಟ್​, ಮೃತ ಮಾಧವಿ ಮಕ್ಕಳೇ... | Hyderabad Horror

Hyderabad Horror: ಜ.15ರಂದು ಪತ್ನಿಯ ಶೀಲವನ್ನು ಶಂಕಿಸಿ, ಆಕೆಯನ್ನು ಕ್ರೂರವಾಗಿ ಕೊಲೆಗೈದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕುಕ್ಕರ್​ನಲ್ಲಿ ಬೇಯಿಸಿ, ಕಡೆಗೆ ಕೆರೆಯಲ್ಲಿ ಬಿಸಾಡಿದ ಬರ್ಬರ ಹತ್ಯೆ ಘಟನೆ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಈ ಹಿಂದೆ ಬೆಂಗಳೂರಿನಲ್ಲಿ ಮಹಿಳೆಯನ್ನು 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದ ಕಿಡಿಗೇಡಿಯೊಬ್ಬ ದೇಹದ ಭಾಗಗಳನ್ನು ಆಕೆ ವಾಸವಿದ್ದ ಮನೆಯಲ್ಲಿನ ಫ್ರಿಡ್ಜ್​ನಲ್ಲಿಟ್ಟು ಸ್ಥಳದಿಂದ ನಾಪತ್ತೆಯಾಗಿದ್ದ ಭೀಕರ ಹತ್ಯೆ ಘಟನೆ ಇಡೀ ದೇಶವನ್ನೇ ನಡುಗಿಸಿತ್ತು. ಈಗ ಈ ಪ್ರಕರಣ ಅಷ್ಟೇ ಭೀಕರತೆಗೆ ಸಾಕ್ಷಿಯಾಗಿದ್ದು, ಜನರನ್ನು ಭಾರೀ ಅಚ್ಚರಿಗೆ ದೂಡಿದೆ.

ತುಂಡು ತುಂಡಾಗಿ ಕತ್ತರಿಸಿದ್ದ ಪಾಪಿ

ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ (35) ಎಂದು ಗುರುತಿಸಲಾಗಿದ್ದು, ಗಂಡ ಗುರುಮೂರ್ತಿ ಭೀಕರವಾಗಿ ಹತ್ಯೆಗೈದಿದ್ದಾನೆ. ಕ್ರೈಮ್​ ಆಧರಿತ ಸರಣಿಗಳನ್ನು ನೋಡಿ, ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ ಪತಿ, ತಾನು ಮಾಡುವ ಕೃತ್ಯದ ಬಗ್ಗೆ ಯಾರಿಗೂ ತಿಳಿಯಬಾರದು. ಇದರಲ್ಲಿ ತನ್ನ ಕೈವಾಡವಿರವುದು ಗೊತ್ತಾಗಬಾರದು, ಸುಳಿವು ಮಾತ್ರ ಸಿಗಲೇ ಬಾರದು ಎಂಬ ನಿಟ್ಟಿನಲ್ಲಿ ಮಾಡಿರುವ ಭೀಕರ ಕೊಲೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪತ್ನಿಯನ್ನು ಹತ್ಯೆಗೈದು ಆಕೆಯ ದೇಹವನ್ನು ಮನೆಯ ಶೌಚಗೃಹದಲ್ಲಿ ತುಂಡು ತುಂಡಾಗಿ ಕತ್ತರಿಸಿದ್ದ ಪಾಪಿ ಪತಿ, ನಂತರದಲ್ಲಿ ಮಾಂಸ ಮತ್ತು ಮೂಳೆಯನ್ನು ಬೇರ್ಪಡಿಸಿ, ಮೂರು ದಿನಗಳ ಕಾಲ ಅದನ್ನು ಕುಕ್ಕರ್​ನಲ್ಲಿ ಬೇಯಿಸಿ, ಕೆರೆಯಲ್ಲಿ ಬಿಸಾಡಿದ್ದ. ಈ ಪ್ರಕರಣವನ್ನು ಬೆನ್ನತ್ತಿರುವ ಪೊಲೀಸರಿಗೆ ಆತನೇ ಕೊಲೆಗೈದಿದ್ದಾನೆ ಎನ್ನುವುದಕ್ಕೆ ಒಂದು ಸಣ್ಣ ಸುಳಿವು ಸಿಗದಿರುವುದು ದುರಂತ.

ಮೂಳೆ ಮತ್ತು ಮಾಂಸ

ಪತ್ನಿಯನ್ನು ತಾನೇ ಹತ್ಯೆಗೈದಿದ್ದು ಎಂದು ತಪ್ಪೊಪ್ಪಿಕೊಂಡಿರುವ ಆರೋಪಿ ಗುರುಮೂರ್ತಿ, ಕೊಲೆ ಹೇಗೆ ಮಾಡಿದೆ? ಹೂಡಿದ ಪ್ಲ್ಯಾನ್​ ಏನು? ಎಂಬುದನ್ನು ಈಗಾಗಲೇ ಎಳೆ ಎಳೆಯಾಗಿ ತನಿಖೆಯಲ್ಲಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ. ಆರೋಪಿ ಸತ್ಯ ಬಾಯ್ಬಿಟ್ಟಿದ್ದರೂ ಕೂಡ ಖಾಕಿ ಪಡೆಗೆ ಮಾತ್ರ ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಸುಳಿವು ಸಿಗದೆ ಇರುವುದು ಸದ್ಯ ದೊಡ್ಡ ತಲೆನೋವಾಗಿ ಕಾಡಿದೆ. ಆರೋಪಿ ಮಾಧವಿಯ ಮೂಳೆ ಮತ್ತು ಮಾಂಸವನ್ನು ಕೆರೆಯಲ್ಲಿ ಬಿಸಾಡಿದೆ ಎಂದು ಹೇಳಿದ ಜಾಗದಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದೇ ಆದರೂ ಯಾವುದೇ ಸಾಕ್ಷಿ ಲಭಿಸಿಲ್ಲ. ಮಿಸ್ಸಿಂಗ್​​ ಕೇಸ್​ನಡಿ ತನಿಖೆ ಕೈಗೊಂಡಿರುವ ಪೊಲೀಸರಿಗೆ ಮನೆಯಲ್ಲಿ ಸಿಕ್ಕ ಒಂದಷ್ಟು ಸುಳಿವುಗಳನ್ನು ತನಿಖಾ ತಂಡ ಈಗ ಎಫ್​ಎಸ್​ಎಲ್​ಗೆ ರವಾನಿಸಿದೆ.

ಡಿಎನ್‌ಎ ಮಾದರಿ

ಮಾಧವಿಯ ದೇಹದ ಅಂಗಾಂಶ, ಕೂದಲು ಮತ್ತು ರಕ್ತದ ಕಲೆಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಡಿಎನ್‌ಎ ಹೊಂದಾಣಿಕೆಗೆ ಪುರಾವೆಗಳನ್ನು ಒದಗಿಸಲಾಗಿದೆ. ಎಫ್‌ಎಸ್‌ಎಲ್​ಗೆ ಮಾಧವಿಯ ಮಕ್ಕಳೇ ಬಲವಾದ ಸಾಕ್ಷಿ. ಮಕ್ಕಳು ಮತ್ತು ತಾಯಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಡಿಎನ್‌ಎ ಕೆಲವೇ ಗಂಟೆಗಳಲ್ಲಿ ಪೊಲೀಸರಿಗೆ ತಲುಪಲಿದೆ ಎಂದು ವರದಿ ಉಲ್ಲೇಖಿಸಿದೆ. ಡಿಎನ್‌ಎ ವರದಿಯೊಂದಿಗೆ ಗುರುಮೂರ್ತಿ ವಿರುದ್ಧ ಕ್ರಮ ಕೈಗೊಳ್ಳಲಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಜ್ಜಾಗಿದ್ದಾರೆ ಎಂದು ಇತ್ತೀಚಿನ ವರದಿ ಹೇಳಿದೆ,(ಏಜೆನ್ಸೀಸ್).