ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನಿಂಗ್ಸ್​ ಜಯ; ನಾಕೌಟ್​ ಆಸೆಗೆ ಬಲ ತುಂಬಿದ ಬೋನಸ್​ ಅಂಕ!

web ranji 3
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಟೀಮ್​ ಇಂಡಿಯಾ ಬ್ಯಾಟರ್​ ಶುಭಮಾನ್​ ಗಿಲ್​ (102 ರನ್​, 171 ಎಸೆತ, 14 ಬೌಂಡರಿ, 3 ಸಿಕ್ಸರ್​) ಶತಕದ ಪ್ರತಿರೋಧವನ್ನು ಸಂಟಿತ ಬೌಲಿಂಗ್​ ದಾಳಿಯೊಂದಿಗೆ ಹಿಮ್ಮೆಟ್ಟಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ 2ನೇ ಚರಣದಲ್ಲಿ ಪ್ರವಾಸಿ ಪಂಜಾಬ್​ ವಿರುದ್ಧ ಇನಿಂಗ್ಸ್​ ಮತ್ತು 207 ರನ್​ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಬೋನಸ್​ ಸಹಿತ 7 ಅಂಕ ಕಲೆಹಾಕಿದ ಮಯಾಂಕ್​ ಅಗರ್ವಾಲ್​ ಪಡೆ ನಾಕೌಟ್​ ಹಂತಕ್ಕೇರುವ ಆಸೆಗೆ ಹೆಚ್ಚಿನ ಬಲ ತುಂಬಿಸಿಕೊಂಡಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರನೇ ದಿನಗಳಲ್ಲಿ ಮುಕ್ತಾಯಗೊಂಡ ತನ್ನ 6ನೇ ಲೀಗ್​ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್​ ತಂಡದ 2ನೇ ಇನಿಂಗ್ಸ್​ಗೂ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. 2 ವಿಕೆಟ್​ಗೆ 24 ರನ್​ಗಳಿಂದ ಶನಿವಾರ 3ನೇ ದಿನದಾಟ ಆರಂಭಿಸಿದ ಪಂಜಾಬ್​ ಚಹಾ ವಿರಾಮಕ್ಕೂ ಮೊದಲೇ 63.4 ಓವರ್​ಗಳಲ್ಲಿ 213 ರನ್​ಗಳಿಗೆ ಆಲೌಟ್​ ಆಯಿತು. ಪಂಜಾಬ್​ ನಾಯಕ ಶುಭಮಾನ್​ ಗಿಲ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 14ನೇ ಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದರೂ, ತಂಡವನ್ನು ಇನಿಂಗ್ಸ್​ ಸೋಲಿನಿಂದ ಪಾರು ಮಾಡುವಲ್ಲಿ ಶಕ್ತರಾಗಲಿಲ್ಲ.

ಗಿಲ್​ ಏಕಾಂಗಿ ಪ್ರತಿರೋಧ

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಬಿಡುವು ಪಡೆದಾಗ ದೇಶೀಯ ಕ್ರಿಕೆಟ್​ನಲ್ಲಿ ಕಡ್ಡಾಯವಾಗಿ ಆಡಬೇಕೆಂಬ ಬಿಸಿಸಿಐ ಸೂಚನೆಯನ್ವಯ ಕಣಕ್ಕಿಳಿದ ಭಾರತ ಏಕದಿನ ತಂಡದ ಉಪನಾಯಕ ಶುಭಮಾನ್​ ಗಿಲ್​ ಮೊದಲ ಇನಿಂಗ್ಸ್​ನಲ್ಲಿ ಕೇವಲ 4 ರನ್​ ಗಳಿಸಿ ನಿರಾಸೆ ಮೂಡಿಸಿದ್ದರೆ, 2ನೇ ಸರದಿಯಲ್ಲಿ ಶತಕದಾಟದೊಂದಿಗೆ ಮಿಂಚಿದರು. ಆದರೆ ತಂಡದ ಇತರ ಬ್ಯಾಟರ್​ಗಳಿಂದ ಸಮರ್ಥ ಬೆಂಬಲ ಲಭ್ಯವಾಗಲಿಲ್ಲ. ಬೆಳಗ್ಗೆ ಯುವ ವೇಗಿ ಯಶೋವರ್ಧನ್​ ಪರಂತಾಪ್​ (37ಕ್ಕೆ 3) ದಾಳಿಗೆ ಕುಸಿದ ಪಂಜಾಬ್​, 84 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಬೇಗನೆ ಶರಣಾಗುವ ಭೀತಿ ಎದುರಿಸಿತು. ಆಗ ಗಿಲ್​ 7ನೇ ವಿಕೆಟ್​ಗೆ ಮಯಾಂಕ್​ ಮಾರ್ಕಂಡೆ (27) ಜತೆಗೂಡಿ 63 ರನ್​ ಮತ್ತು 8ನೇ ವಿಕೆಟ್​ಗೆ ಸುಖ್​ದೀಪ್​ ಬಾಜ್ವ (26) ಜತೆಗೂಡಿ 40 ರನ್​ ಸೇರಿಸಿ ಪ್ರತಿರೋಧ ತೋರಿದರು. 159 ಎಸೆತಗಳಲ್ಲಿ ಶತಕ ಪೂರೈಸಿದ ಬಳಿಕ ಗಿಲ್​ ಸ್ಪಿನ್ನರ್​ ಶ್ರೇಯಸ್​ ಗೋಪಾಲ್​ (19ಕ್ಕೆ 3) ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ ಕೊನೇ 2 ವಿಕೆಟ್​ಗಳನ್ನೂ ಬೇಗನೆ ಕಬಳಿಸಿದ ಶ್ರೇಯಸ್​ ಕರ್ನಾಟಕಕ್ಕೆ ಇನ್ನೊಂದು ದಿನ ಮತ್ತು ಒಂದು ಅವಧಿಯ ಆಟ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.

ಪಂಜಾಬ್​: 55 ಮತ್ತು 213 (ಗಿಲ್​ 102, ಜಸ್ಸಿಂದರ್​ 13, ರಮಣ್​ದೀಪ್​ 0, ಮಾರ್ಕಂಡೆ 27, ಸುಖ್​ದೀಪ್​ 26*, ಗುರ್​ನೂರ್​ 12, ಪರಂತಾಪ್​ 37ಕ್ಕೆ 3, ಶ್ರೇಯಸ್​ 19ಕ್ಕೆ 3, ಪ್ರಸಿದ್ಧ ಕೃಷ್ಣ 57ಕ್ಕೆ 2, ಅಭಿಲಾಷ್​ 58ಕ್ಕೆ 1, ವಿ. ಕೌಶಿಕ್​ 37ಕ್ಕೆ 1), ಕರ್ನಾಟಕ: 475. ಪಂದ್ಯಶ್ರೇಷ್ಠ: ಆರ್​. ಸ್ಮರಣ್​.

*ಕರ್ನಾಟಕಕ್ಕೆ ಮುಂದಿನ ಪಂದ್ಯ

ಯಾವಾಗ: ಜ. 30-ಫೆ. 2

ಎದುರಾಳಿ: ಹರಿಯಾಣ

ಎಲ್ಲಿ: ಬೆಂಗಳೂರು

ಕರ್ನಾಟಕದ ನಾಕೌಟ್​ ಲೆಕ್ಕಾಚಾರ

ಕರ್ನಾಟಕ ತಂಡ (6 ಪಂದ್ಯ,2 ಜಯ, 4 ಡ್ರಾ) ಗೆಲುವಿನೊಂದಿಗೆ ಒಟ್ಟಾರೆ 19 ಅಂಕ ಕಲೆಹಾಕಿ ಸಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಹರಿಯಾಣ ತಂಡ (6 ಪಂದ್ಯ, 3 ಜಯ, 3 ಡ್ರಾ) 26 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕೇರಳ ತಂಡ ಸದ್ಯ 18 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೂ, ಮಧ್ಯಪ್ರದೇಶ ವಿರುದ್ಧ ಪ್ರಸಕ್ತ ನಡೆಯುತ್ತಿರುವ ಪಂದ್ಯದಲ್ಲಿ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ ಅಂಕಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೇರಲಿದೆ. ಮಧ್ಯಪ್ರದೇಶದಿಂದ 363 ರನ್​ ಸವಾಲು ಪಡೆದಿರುವ ಕೇರಳ, 3ನೇ ದಿನದಂತ್ಯಕ್ಕೆ 1 ವಿಕೆಟ್​ಗೆ 28 ರನ್​ ಗಳಿಸಿದೆ. ಕೊನೇ ದಿನ ಗೆಲುವಿಗೆ ಇನ್ನೂ 335 ರನ್​ ಬೇಕಿದೆ. ಕೇರಳ ಸೋತರೆ, ಕರ್ನಾಟಕ ಕೊನೇ ಪಂದ್ಯದಲ್ಲಿ ಹರಿಯಾಣ ಎದುರು ಗೆದ್ದು ನಾಕೌಟ್​ ಪ್ರವೇಶಿಸಬಹುದಾಗಿದೆ. ಆದರೆ ಕೇರಳ ಡ್ರಾ ಅಥವಾ ಗೆಲುವು ಕಂಡರೆ ಕರ್ನಾಟಕ ಕೊನೇ ಪಂದ್ಯದಲ್ಲಿ ಬೋನಸ್​ ಸಹಿತ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿಲಿದೆ. ಕೇರಳ ಕೊನೇ ಪಂದ್ಯದಲ್ಲಿ ದುರ್ಬಲ ಬಿಹಾರ ವಿರುದ್ಧ ಆಡುವ ಅನುಕೂಲವನ್ನು ಹೊಂದಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳಷ್ಟೇ ನಾಕೌಟ್​ ಹಂತಕ್ಕೇರಲಿವೆ.

ಕೊನೇ ಪಂದ್ಯಕ್ಕೆ ರಾಹುಲ್​?

ಜನವರಿ 30ರಿಂದ ಬೆಂಗಳೂರಿನಲ್ಲೇ ನಡೆಯಲಿರುವ ರಾಜ್ಯ ತಂಡದ ಕೊನೇ ಲೀಗ್​ ಪಂದ್ಯಕ್ಕೆ ಟೀಮ್​ ಇಂಡಿಯಾ ಬ್ಯಾಟರ್​ ಕೆಎಲ್​ ರಾಹುಲ್​ ಲಭ್ಯರಾಗುವ ನಿರೀಕ್ಷೆ ಇದೆ. ಕಡ್ಡಾಯವಾಗಿ ದೇಶೀಯ ಕ್ರಿಕೆಟ್​ ಆಡಬೇಕೆಂಬ ಬಿಸಿಸಿಐ ಮಾರ್ಗಸೂಚಿಯ ನಡುವೆ ಮೊಣಕೈ ನೋವಿನಿಂದಾಗಿ ಪಂಜಾಬ್​ ವಿರುದ್ಧದ ಪಂದ್ಯ ತಪ್ಪಿಸಿಕೊಂಡಿದ್ದ ರಾಹುಲ್​, ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ಮುನ್ನ ರಣಜಿಯಲ್ಲಿ ಆಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net