ಮೈಸೂರು: ಮಲಯಾಳಂನಲ್ಲಿ ಮೂಡಿಬಂದ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ ಸಿನಿಮಾ ಪಂಚ ಭಾಷೆಯಲ್ಲೂ ರಿಮೇಕ್ ಆಗಿದೆ. ಮಾನ ರಕ್ಷಣೆಗಾಗಿ ಯುವಕನೊಬ್ಬನನ್ನು ಕೊಲೆ ಮಾಡುವ ಪತ್ನಿ ಮತ್ತು ಮಗಳನ್ನು ಉಳಿಸಿಕೊಳ್ಳಲು ಕಥಾನಾಯಕ ಮಾಡುವ ಉಪಾಯವೇ ಚಿತ್ರದ ಥ್ರಿಲ್ಲಿಂಗ್ ಸ್ಟೋರಿಯಾಗಿದೆ.
ಇದೀಗ ಇದೇ ದೃಶ್ಯಂ ಸಿನಿಮಾ ನಿಜ ಜೀವನದಲ್ಲೂ ಪ್ರೇರಣೆಯಾಗಿದೆ. ವಿಪರ್ಯಾಸವೆಂದರೆ ಚಿತ್ರದಲ್ಲಿ ಕೊಲೆ ಅನಿರೀಕ್ಷಿತವಾಗಿ ನಡೆದರೂ, ಒಳ್ಳೆಯ ಉದ್ದೇಶಕ್ಕಾಗಿ ಕುಟುಂಬವನ್ನು ಉಳಿಸಿಕೊಳ್ಳಲು ನಾಯಕ ಪ್ಲಾನ್ ಮಾಡುತ್ತಾನೆ. ಆದರೆ, ಈ ಪ್ರಕರಣದಲ್ಲಿನ ಕೊಲೆಯ ಸಂಚು ದುರುದ್ದೇಶದಿಂದ ಕೂಡಿದ್ದು, ಪತ್ನಿಯೇ ಪತಿಯನ್ನು ಪ್ರಿಯಕರನಿಂದ ಕೊಲೆ ಮಾಡಿಸುತ್ತಾಳೆ. ಕೊನೆಗೆ ಏನೇನೋ ಕತೆ ಕಟ್ಟಿ ಪೊಲೀಸರಿಂದ ಬಚಾವಾಗಲು ಯತ್ನಿಸಿದರೂ, ಸಾಧ್ಯವಾಗದೇ ಪ್ರಿಯಕರನೊಂದಿಗೆ ಪೊಲೀಸ್ ಬಲೆಗೆ ಬೀಳುತ್ತಾಳೆ. ಒಳ್ಳೆಯದೋ? ಕೆಟ್ಟದ್ದೋ? ಕೊಲೆ ಮಾಡುವುದಂತೂ ಕಾನೂನಿ ಪ್ರಕಾರ ಘೋರ ಅಪರಾಧವೆಂಬುದು ನೆನಪಿನಲ್ಲಿರಲಿ.
ಅಂದಹಾಗೆ ಘಟನೆ ನಡೆದಿರುವುದು ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಲ್ಲದೆ, ಪ್ರತಿದಿನ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಪತಿಯನ್ನು ಪ್ರಿಯಕರನ ಸಹಾಯದಿಂದ ಪತ್ನಿಯೇ ಕೊಲೆ ಮಾಡಿಸಿದ್ದಾಳೆ. ಆನಂದ ಕೊಲೆಯಾದ ದುರ್ದೈವಿ. ಶಾರದಾ ಹಾಗೂ ಆಕೆಯ ಪ್ರಿಯಕರ ಬಾಬು ಬಂಧಿತ ಆರೋಪಿಗಳು.
ಕೊಲೆ ಮಾಡಿದ ಬಳಿಕ ಜೂನ್ 23ರಂದು ಸಾಲಿಗ್ರಾಮದ ಚುಂಚನಕಟ್ಟೆ ಮುಖ್ಯ ರಸ್ತೆ ಬಳಿ ಆನಂದನ ಮೃತ ದೇಹ ಪತ್ತೆಯಾಗಿತ್ತು. ಅಪಘಾತದಲ್ಲಿ ಮೃತಪಟ್ಟಂತೆ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸಾಲಿಗ್ರಾಮ ಪೊಲೀಸರಿಗೆ ಶಾರದಾಳನ್ನು ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲಾಗಿತ್ತು.
ಹಲವು ದಿನಗಳಿಂದ ಪ್ರಿಯಕರ ಬಾಬು ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಶಾರದಾ, ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳಂತೆ. ಇದಕ್ಕಾಗಿ ಪ್ರಿಯಕರನ ಮೊರೆ ಹೋಗಿದ್ದಳು. ಇಬ್ಬರು ದೃಶ್ಯಂ ಸಿನಿಮಾ ಪ್ರೇರಣೆಯಿಂದ ಪ್ಲಾನ್ ಸಿದ್ದಪಡಿಸಿದ್ದರು. ಬಳಿಕ ಕೊಲೆ ಮಾಡಿ ರಸ್ತೆ ಬದಿ ಎಸೆದು ಅಪಘಾತ ಎಂಬಂತೆ ಬಿಂಬಿಸಿದ್ದರು. ಆದರೆ, ಅವರ ಸಂಚು ಬಯಲಾಗಿ, ಇದೀಗ ಜೈಲುವಾಸಿಗಳಾಗಿದ್ದಾರೆ. (ದಿಗ್ವಿಜಯ ನ್ಯೂಸ್)