ಮಾಸ್ಕೋ: ಕಂದು ಬಣ್ಣದ ಕರಡಿಗಳನ್ನು ಬೇಟೆಯಾಡಿ ಅದರ ಕಳೇಬರದ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ 23 ವರ್ಷದ ಬೇಟೆಗಾತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಳ ನಡೆಯನ್ನು ಜಾಲತಾಣದಲ್ಲಿ ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿರುವ ಆಕೆ, ಮಾಂಸ ತಿನ್ನುತ್ತಾರೆ ಆದರೆ, ವನ್ಯಜೀವಿಗಳಿಗೆ ಫೈರಿಂಗ್ ಮಾಡಿದರೆ ನನಗೆ ಬೆದರಿಕೆಯೊಡ್ಡುತ್ತಾರೆ. ಅವರೆಲ್ಲ ಅಶಿಕ್ಷಿತ ಕಪಟಿಗಳು ಎಂದು ಜರಿದಿದ್ದಾಳೆ.
ರಷ್ಯಾದ ಸೆರ್ಪುಖೋವ್ದಲ್ಲಿ ಬೇಟೆಯ ವ್ಯವಸ್ಥಾಪಕರಾಗಿರುವ ಅಲೆಕ್ಸಾಂಡ್ರಾ ತ್ಯುಚೆವಾ, ಕರಡಿ, ಜಿಂಕೆ ಮತ್ತು ಟಗರುಗಳನ್ನು ಬೇಟೆಯಾಡಲು 53 ವರ್ಷ ತಂದೆಯೊಂದಿಗೆ ಸುಮಾರು 300 ಮೈಲಿ ಪ್ರಯಾಣ ಮಾಡಿದ್ದಾರೆ. ತನ್ನ 18ನೇ ವಯಸ್ಸಿನಿಂದಲೂ ಈ ಹವ್ಯಾಸವನ್ನು ತ್ಯುಚೆವಾ ಬೆಳೆಸಿಕೊಂಡಿದ್ದಾರೆ.
ತ್ಯುಚೆವಾ ಕ್ರಮವನ್ನು ಟೀಕಿಸಿರುವ ನೆಟ್ಟಿಗರು ಅವಳಿಗೆ "ಕ್ರೂರ ಕೊಲೆಗಾತಿ" ಎಂಬ ಹಣೆಪಟ್ಟಿಯನ್ನು ನೀಡಿದ್ದಾರೆ. ಕರಡಿಯ ಕಳೇಬರದಂತೆ ನಿನ್ನ ದೇಹವು ಹಾಗೇ ಬಿದ್ದಿರಲಿ ಎಂದು ಕೆಲ ನೆಟ್ಟಿಗರು ತ್ಯುಚೆವಾಗೆ ಹಿಡಿ ಶಾಪ ಹಾಕುತ್ತಿದ್ದರೆ, ಮತ್ತೆ ಕೆಲವರು ಮುಂದೊಂದು ದಿನ ಅವಳ ಮಕ್ಕಳು ಇದಕ್ಕೆ ಬೆಲೆತೆರಬೇಕಾಗುತ್ತದೆ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಆದರೆ, ತ್ಯುಚೆವಾ ಇದನ್ನೆಲ್ಲಾ ತಲೆಕೆಡಿಸಿಕೊಳ್ಳದೇ, ಬೇಟೆ ನನ್ನ ಜೀವನ ಭಾಗವಾಗಿದೆ ಎಂದಿದ್ದಾಳೆ. ಕ್ರೀಡೆಯ ಬಗ್ಗೆ ತನ್ನ ಸ್ನಾತಕೋತ್ತರ ಪದವಿ ಪ್ರಬಂಧವನ್ನು ಬರೆಯುತ್ತಿರುವ ತ್ಯುಚೆವಾ, ಬೇಟೆಗಳು 'ಸುಸ್ಥಿರ' ಮತ್ತು 'ಸಂರಕ್ಷಣೆ'ಗಾಗಿ ಸಹಕಾರಿಯಾಗಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ.
ಒಂದು ವಿಚಾರದ ಮೇಲೆ ಶೂನ್ಯ ಜ್ಞಾನ ಇರುವ ಕೆಲವರು ಯಾವುದನ್ನೂ ಅರ್ಥ ಮಾಡಿಕೊಳ್ಳದೇ ಸುಮ್ಮನೇ ದ್ವೇಷವನ್ನು ಹರಡುತ್ತಾರೆ. ಮಾಂಸವನ್ನು ತಿನ್ನುವುದು ಸಹ ಕಪಟವೇ ಎಂದು ಜರಿದಿರುವ ತ್ಯುಚೆವಾ, ಬೇಕಾದರೆ ನನ್ನ ಇನ್ಸ್ಟಾಗ್ರಾಂನಲ್ಲಿ ಸುಸ್ಥಿರ ಮತ್ತು ಸಂರಕ್ಷಣೆ ಬೇಟೆಯ ಬಗ್ಗೆ ಜನರಿಗೆ ತಿಳಿಸುವ ಲೇಖನಗಳ ಲಿಂಕ್‌ಗಳನ್ನು ಹಂಚಿಕೊಳ್ಳುತ್ತೇನೆ. ಅದನ್ನು ಓದಿಕೊಳ್ಳಲಿ ಎಂದು ಸವಾಲು ಎಸೆದರು.
12ನೇ ವಯಸ್ಸಿನಿಂದಲೂ ತನ್ನ ತಂದೆಯೊಂದಿಗೆ ಮೀನು ಹಿಡಿಯುವುದು ಮತ್ತು ಶಿಬಿರಗಳಲ್ಲಿ ಉಳಿದುಕೊಳ್ಳುವುದು ತ್ಯುಚೆವಾಗೆ ಅಭ್ಯಾಸವಾಗಿದೆ. ಆದರೆ, ಆಕೆಯ ತಾಯಿ ಮತ್ತು ಮೂವರು ಸಹೋದರಿಗೆ ಇದರಲ್ಲಿ ಹೆಚ್ಚಿನ ಆಶಕ್ತಿಯಿಲ್ಲ. ನಾನು ಮತ್ತು ನನ್ನ ತಂದೆ ತುಂಬಾ ಆಪ್ತರು. ಬೇಟೆಯಾಡುವ ಮೂಲಕ ಇಬ್ಬರು ಒಟ್ಟಿಗೆ ತುಂಬಾ ಸಮಯ ಕಳೆಯುತ್ತೇವೆ. ಬೇಟೆಯ ಸೂಕ್ತ ನಿರ್ವಹಣೆಯಿಂದ ಆಫ್ರಿಕಾದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಅಮೆರಿಕದಲ್ಲಿ ದೊಡ್ಡ ಕೋಡಿನ ಕುರಿಗಳು ಹೆಚ್ಚಾಗಿವೆ ಎಂದು ತ್ಯುಚೆವಾ ಸಮರ್ಥನೆ ನೀಡಿದ್ದಾರೆ. (ಏಜೆನ್ಸೀಸ್)