ನ್ಯೂಸ್

ಗರ್ಲ್​​ಫ್ರೆಂಡ್​ ಜತೆಗೆ ಹೊಸ ಮನೆಗೆ ಶಿಫ್ಟ್​ ಆಗುತ್ತಾರಾ ಹೃತಿಕ್​ ರೋಶನ್​?

ಮುಂಬೈ: ಹೃತಿಕ್​ ರೋಶನ್​, ಸಾಬಾ ಆಜಾದ್​ ಎಂಬ ಯುವತಿಯ ಜತೆಗೆ ಹೆಚ್ಚುಹೆಚ್ಚು ಸುತ್ತುತ್ತಿದ್ದು, ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ಬಹಳ ಕೇಳಿಬರುತ್ತಿವೆ. ಇದೀಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಹೃತಿಕ್​ ಸದ್ಯದಲ್ಲೇ ತಮ್ಮ ಗೆಳತಿ ಜತೆಗೆ ಹೊಸ ಮನೆಗೆ ಶಿಫ್ಟ್​ ಆಗಲಿದ್ದು, ಅಲ್ಲಿ ಅವರ ಜತೆಗೆ ವಾಸಿಸಲಿದ್ದಾರಂತೆ.

ಹೌದು, ಕೆಲವು ತಿಂಗಳುಗಳ ಹಿಂದೆ ಹೃತಿಕ್​ ರೋಶನ್​ ಬರೋಬ್ಬರಿ 67.50 ಕೋಟಿ ಖರ್ಚು ಮಾಡಿ ಜುಹು-ವರ್ಸೋವಾ ಲಿಂಕ್​ ರೋಡ್​ ಬಳಿ ಒಂದು ಡ್ಯೂಪ್ಲೇ ಮನೆಯನ್ನು ಖರೀದಿಸಿದ್ದರು. ಈ ಫ್ಲಾಟ್​ಗಳು 15 ಮತ್ತು 16ನೇ ಮಹಡಿಯಲ್ಲಿವೆಯಂತೆ. ಈ ಡ್ಯೂಪ್ಲೇ ಮನೆಯ ರಿನೋವೇಷನ್​ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಹೃತಿಕ್​ ತಮ್ಮ ಗೆಳತಿ ಜತೆಗೆ ಅಲ್ಲಿಗೆ ಹೋಗಿ ಸೆಟಲ್​ ಆಗುತ್ತಾರೆ ಎಂಬ ಸುದ್ದಿ ಇದೆ.

ಆದರೆ, ಈ ಸುದ್ದಿಯನ್ನು ಹೃತಿಕ್​ ಅಲ್ಲಗೆಳೆದಿದ್ದಾರೆ. ಇದೊಂದು ಅಪ್ಪಟ ಸುಳ್ಳು ಸುದ್ದಿ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಕುರಿತಾಗಿ ಸೋಷಿಯಲ್​ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ.

'ಒಬ್ಬ ಪಬ್ಲಿಕ್​ ಫಿಗರ್​ ಆಗಿ ಜನ ನನ್ನನ್ನು ಕುತೂಹಲದಿಂದ ಗಮನಿಸುತ್ತಿರುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ, ಈ ರೀತಿ ಸುಳ್ಳುಸುದ್ದಿ ಹರಡುವುದು ತಪ್ಪು. ಅದರಲ್ಲೂ ಜವಾಬ್ದಾರಿ ಇರುವ ಮಾಧ್ಯಮದವರು ಈ ರೀತಿ ಸುಳ್ಳುಸುದ್ದಿ ಹರಡಬಾರದು' ಎಂದು ಬರೆದುಕೊಂಡಿದ್ದಾರೆ.