FASTag Pass: ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಊರಿಂದ ಊರಿಗೆ ಕಾರಿನಲ್ಲಿ ಪ್ರಯಾಣಿಸುವವರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯನ್ನೇ ನೀಡಿದೆ. ಟೋಲ್ ಪ್ಲಾಜಾಗಳಲ್ಲಿ ಪದೇ ಪದೇ ಹಣವನ್ನು ಪಾವತಿ ಮಾಡುವ ಮೂಲಕ ರಿಚಾರ್ಚ್ ಮಾಡಿಕೊಳ್ಳುತ್ತಿದ್ದ ಪ್ರಯಾಣಿಕರಿಗೆ ಕೇಂದ್ರ ಘೋಷಿಸಿರುವ ವಾರ್ಷಿಕ ಪಾಸ್ ಬಂಪರ್ ಆಫರ್ ಆಗಿ ಪರಿಣಮಿಸಿದೆ. ಇದು ವಾಹನ ಚಾಲಕರಿಗೆ ಖಂಡಿತ ಒಳ್ಳೆ ಸುದ್ದಿಯೇ ನಿಜ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಚಯಿಸಲಿದೆ. ಇದು ಈ ವರ್ಷದ ಆಗಸ್ಟ್ 15ರಿಂದಲೇ ಜಾರಿಗೆ ಬರಲಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಾಗ್ಗೆ ಪ್ರಯಾಣಿಸುವವರಿಗೆ ಪದೇ ಪದೇ ರೀಚಾರ್ಜ್ ಮಾಡಿಕೊಳ್ಳುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುವುದರ ಜೊತೆಗೆ, ಟೋಲ್ ಹಣವನ್ನು ಅಗ್ಗವಾಗಿಸುವುದು ಇದರ ಉದ್ದೇಶವಾಗಿದೆ.
ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯನ್ನು ಇಳಿಸುವುದು, ಟೋಲ್ ವಹಿವಾಟುಗಳನ್ನು ವೇಗಗೊಳಿಸುವುದು, ಪ್ಲಾಜಾಗಳಲ್ಲಿ ಹೆಚ್ಚಿನ ವಾಹನ ದಟ್ಟಣೆಯನ್ನು ಕಡಿತಗೊಳಿಸುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ಪಾವತಿಗಳನ್ನು ಸುಲಭಗೊಳಿಸುವುದು ವಾರ್ಷಿಕ್ ಪಾಸ್‌ನ ಮೂಲ ಉದ್ದೇಶವಾಗಿದೆ. ಇದು ವಾಹನ ಸವಾರರಿಗೆ ಭಾರೀ ಅನುಕೂಲಕವಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ವಾರ್ಷಿಕ ಪಾಸ್‌ನ ಬೆಲೆ 3,000 ರೂ. ಈ ಮೊತ್ತವನ್ನು ಪಾವತಿಸುವ ಖಾಸಗಿ ವಾಹನ ಮಾಲೀಕರು, ಒಂದು ವರ್ಷ ಅಥವಾ 200 ಟೋಲ್ ಕ್ರಾಸಿಂಗ್‌ಗಳವರೆಗೆ ಟೋಲ್ ಪಾವತಿಸುವ ಅಗತ್ಯವಿಲ್ಲ. ಈ ಸೌಲಭ್ಯ ಕಾರು, ಜೀಪು, ವ್ಯಾನ್‌ಗಳಂತಹ ವಾಣಿಜ್ಯೇತರ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಪಾಸ್ ಖರೀದಿಸಲು, ವಾಹನವು ಈಗಾಗಲೇ ಸಕ್ರಿಯ ಫಾಸ್ಟ್‌ಟ್ಯಾಗ್ ಅನ್ನು ಹೊಂದಿರಬೇಕು. ನೀವು 'ರಾಜ್‌ಮಾರ್ಗ್ ಯಾತ್ರಾ' ಅಪ್ಲಿಕೇಶನ್ ಅಥವಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇನ್ನೊಂದು ಮುಖ್ಯವಾದ ವಿಷಯವೆಂದರೆ ಈ ಪಾಸ್ NHAI ಮತ್ತು ಕೇಂದ್ರ ಸಾರಿಗೆ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ, ಸಮೃದ್ಧಿ ಮಹಾಮಾರ್ಗ್, ಅಟಲ್ ಸೇತು ಮುಂತಾದ ರಾಜ್ಯ ಸರ್ಕಾರಿ ರಸ್ತೆಗಳಲ್ಲಿ ಮಾನ್ಯವಾಗಿಲ್ಲ. ಇದು ಗಮನಿಸಬೇಕಾದ ವಿಷಯ. ಈ ಮಾರ್ಗಗಳಲ್ಲಿ ಪ್ರಯಾಣಿಸುವಾಗ, ಟೋಲ್ ಶುಲ್ಕವನ್ನು ಎಂದಿನಂತೆ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ನಿಂದಲೇ ಕಡಿತಗೊಳಿಸಲಾಗುತ್ತದೆ.
ಮತ್ತೊಂದು ಮುಖ್ಯ ವಿಷಯ, ಒಂದು ವಾಹನದಲ್ಲಿ ತೆಗೆದುಕೊಂಡ ಪಾಸ್ ಅನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ಅಲ್ಲದೆ, 200 ಟ್ರಿಪ್ ಅಥವಾ ಒಂದು ವರ್ಷದ ನಂತರ ಪಾಸ್ ಅವಧಿ ಮುಕ್ತಾಯಗೊಳ್ಳುತ್ತದೆ. ಬಳಕೆದಾರರು ಬಯಸಿದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪಾಸ್‌ಗೆ ಯಾವುದೇ ಸ್ವಯಂ ನವೀಕರಣ ಸೌಲಭ್ಯವಿಲ್ಲ.
ಪ್ರಮುಖ ವಿಷಯಗಳು
- ವಾರ್ಷಿಕ ಪಾಸ್ ನೇರವಾಗಿ ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಬಹುದು. (FASTag ಸಕ್ರಿಯವಾಗಿರಬೇಕು ಮತ್ತು ನಿಮ್ಮ ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಮಾಡಬೇಕು).
- ಈ ವಾರ್ಷಿಕ ಯೋಜನೆ NHAI, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಅಡಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಉದಾಹರಣೆಗೆ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ಮುಂಬೈ-ನಾಸಿಕ್, ಮುಂಬೈ-ಸೂರತ್, ಮುಂಬೈ-ರತ್ನಗಿರಿ ಮಾರ್ಗಗಳು.
- ರಾಜ್ಯ ಹೆದ್ದಾರಿಗಳು ಅಥವಾ ಪುರಸಭೆಯ ಟೋಲ್ ರಸ್ತೆಗಳಲ್ಲಿ ವಾರ್ಷಿಕ ಪಾಸ್ ಮಾನ್ಯವಿಲ್ಲ. ಸಾಮಾನ್ಯ ಶುಲ್ಕಗಳು ಅನ್ವಯವಾಗುತ್ತವೆ. ಫಾಸ್ಟ್‌ಟ್ಯಾಗ್ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ, ಮುಂಬೈ-ನಾಗ್‌ಪುರ ಎಕ್ಸ್‌ಪ್ರೆಸ್‌ವೇ (ಸಮೃದ್ಧಿ ಮಹಾಮಾರ್ಗ್), ಅಟಲ್ ಸೇತು, ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಅಹಮದಾಬಾದ್-ವಡೋದರಾ ಎಕ್ಸ್‌ಪ್ರೆಸ್‌ವೇ ಮುಂತಾದ ಕೆಲವು ರಾಜ್ಯ ಹೆದ್ದಾರಿಗಳಿವೆ. ಈ ರಸ್ತೆಗಳಲ್ಲಿ ವಾರ್ಷಿಕ ಪಾಸ್ ಮಾನ್ಯವಿಲ್ಲ.
- ಈ ಯೋಜನೆ ಪುನರಾವರ್ತಿತ ಆನ್‌ಲೈನ್ ರೀಚಾರ್ಜ್‌ಗಳನ್ನು ತಪ್ಪಿಸುತ್ತದೆ. ಇದು ದೈನಂದಿನ ಪ್ರಯಾಣಿಕರಿಗೆ ಉಪಯುಕ್ತವಾಗಿದೆ. ಈ ಪಾಸ್ ಅನ್ನು ವರ್ಗಾಯಿಸುವಂತಿಲ್ಲ. ಇದು ಒಂದೇ ನೋಂದಾಯಿತ ವಾಹನಕ್ಕೆ ಲಿಂಕ್ ಮಾಡಲಾದ ಫ್ಯಾಸ್ಟ್ಯಾಗ್ ಜೊತೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.
ಆನ್‌ಲೈನ್‌ನಲ್ಲಿ ವಾರ್ಷಿಕ ಪಾಸ್ ಖರೀದಿಸುವುದು ಹೇಗೆ?
- ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್ ಅಥವಾ NHAI/MoRTH ವೆಬ್‌ಸೈಟ್‌ಗೆ ಕ್ಲಿಕ್ ಮಾಡಿ.
- ನಿಮ್ಮ ವಾಹನ ಸಂಖ್ಯೆ, ಫ್ಯಾಸ್ಟ್ಯಾಗ್ ಐಡಿ ಇತ್ಯಾದಿಗಳನ್ನು ನಮೂದಿಸುವ ಮೂಲಕ ಲಾಗಿನ್ ಆಗಿ. (FASTag ಸಕ್ರಿಯವಾಗಿರಬೇಕು, ಸರಿಯಾಗಿ ಸ್ಥಾಪಿಸಬೇಕು ಮತ್ತು ನಿಮ್ಮ ವಾಹನಕ್ಕೆ ಲಿಂಕ್ ಮಾಡಬೇಕು ಎಂಬುದನ್ನು ಗಮನಿಸಿ).
- ಯುಪಿಐ, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ 3,000 ರೂ. ಅನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
- ಪಾಸ್ ಅನ್ನು ನಿಮ್ಮ ಅಸ್ತಿತ್ವದಲ್ಲಿರುವ ಫ್ಯಾಸ್ಟ್ಯಾಗ್ ಲಿಂಕ್ ಮಾಡಲಾಗುತ್ತದೆ. ಆಗಸ್ಟ್ 15ರಂದು ಎಸ್ಎಂಎಸ್ ಸಕ್ರಿಯಗೊಳಿಸುವಿಕೆಯನ್ನು ದೃಡಪಡಿಸುತ್ತದೆ.
ವಾರ್ಷಿಕ ಪಾಸ್ ನಿಯಮಗಳು ಮತ್ತು ಮಿತಿಗಳು
- ಆಗಸ್ಟ್ 15ರಿಂದ, ನಿಮ್ಮ ವಾಹನವು NHAI ಅಥವಾ MoRTH ಅಡಿಯಲ್ಲಿ ಫ್ಯಾಸ್ಟ್ಯಾಗ್ ಸಕ್ರಿಯಗೊಳಿಸಿದ ಟೋಲ್ ಪ್ಲಾಜಾವನ್ನು ದಾಟಿದಾಗಲೆಲ್ಲ ಒಂದು ಟ್ರಿಪ್ ಅನ್ನು ಕಡಿತಗೊಳಿಸಲಾಗುತ್ತದೆ.
- 200 ಟ್ರಿಪ್‌ಗಳ ಮಿತಿ ಅಥವಾ ಒಂದು ವರ್ಷದ ಅವಧಿ ತಲುಪಿದ ನಂತರ ವ್ಯವಸ್ಥೆಯು ಸ್ವಯಂಚಾಲಿತವಾಗಿ ನಿಯಮಿತ ಪೇ-ಪರ್-ಯೂಸ್ ಫ್ಯಾಸ್ಟ್ಯಾಗ್ಗೆ ಮರಳುತ್ತದೆ.
ಪ್ರಮುಖ ನಿಯಮಗಳು
- ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ. ವಾಣಿಜ್ಯ ವಾಹನಗಳಿಗೆ ಮಾನ್ಯವಿಲ್ಲ.
- ವರ್ಗಾವಣೆಗೆ ಅವಕಾಶವಿಲ್ಲ, ಮರುಪಾವತಿ ಮಾಡಲಾಗದ- ನೋಂದಾಯಿತ ವಾಹನಗಳಿಗೆ ಮಾತ್ರ ಮಾನ್ಯ.
- ಸೀಮಿತ ವ್ಯಾಪ್ತಿ. ಅರ್ಹ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಮಾನ್ಯ.
- ಸ್ವಯಂ ನವೀಕರಣವಿಲ್ಲ. ಅವಧಿ ಮುಗಿದ ಬಳಿಕ ಬಳಕೆದಾರರು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು,(ಏಜೆನ್ಸೀಸ್).