ಲಖನೌ: ಆನ್ಲೈನ್ ಗೇಮಿಂಗ್ ಮೂಲಕ ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದ ದಂಧೆಯನ್ನು ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ಪೊಲೀಸರು ಬಯಲಿಗೆಳೆದಿದ್ದಾರೆ.
ಪೋರ್ಟ್ನೈಟ್ ಎಂಬ ಅಪ್ಲಿಕೇಶನ್ ಮೂಲಕ ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಶಹನವಾಜ್ ಎಂಬುವವನಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ. ತಲೆಮಾರಿಸಿಕೊಂಡಿರುವ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಘಾಜಿಯಾಬಾದ್ ಡಿಸಿಪಿ ನಿಪುನ್ ಅಗರ್ವಾಲ್ ಪೋರ್ಟ್ನೈಟ್ ಎಂಬ ಅಪ್ಲಿಕೇಶನ್ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಆರೋಪಿ ಶಹನವಾಜ್ ಅಲಿಯಾಸ್ ಬಡ್ಡು ಪರಿಚಯಿಸಿಕೊಳ್ಳುತ್ತಿದ್ದ. ಇದಾದ ಬಳಿಕ ಅವರ ಜೊತೆ ಆಪ್ತವಾಗಿ ಮಾತನಾಡುತ್ತಿದ್ದ ಈತ ಅವರ ನಂಬಿಕೆಯನ್ನು ಗಳಿಸುತ್ತಿದ್ದ.
ಆಟದಲ್ಲಿ ಅಪ್ರಾಪ್ತ ವಯಸ್ಕರನ್ನು ಸೋಲಿಸಿ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಾನು ಹೇಳುವ ಕೆಲಸ ಮಾಡಬೇಕೆಂದು ಹೇಳಿ ಅವರಿಗೆ ಟಾಸ್ಕ್ ಒಂದನ್ನು ಕೊಡುತ್ತಿದ್ದ. ಕುರಾನ್ನ ಓದಲು ಹೇಳುತ್ತಿದ್ದ. ಬಳಿಕ ಆಟದಲ್ಲಿ ಮಕ್ಕಳು ಗೆದ್ದಾಗ ಅವರಿಗೆ ಇಸ್ಲಾಂ ಧರ್ಮದ ಮಹತ್ವವನ್ನು ಹೇಳಿ ಮತಾಂತರ ಮಾಡುತ್ತಿದ್ದ.
ಆರೋಪಿ ಅಪ್ರಾಪ್ತ ವಯಸ್ಕರೊಂದಿಗೆ ಡಿಸ್ಕಾರ್ಡ್ ಚಾಟಿಂಗ್ ಪ್ಲಾಟ್ಫರ್ಮ್ ಮೂಲಕ ನಿರಂತರ ಸಂಪರ್ಕ ಹೊಂದಿದ್ದ. ಅವರಿಗೆ ಇಸ್ಲಾಂ ಧರ್ಮಪ್ರಚಾರಕರಾದ ಜಾಕಿರ್ ನಾಯ್ಕ್, ತಾರಿಖ್ ಜಮೀಲ್ ಅವರ ವಿಡಿಯೋಗಳನ್ನು ಕಳುಹಿಸುತ್ತಿದ್ದ. ಭಾರತ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಇವರು ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಮತಾಂತರ ಸಂಬಂಧ ಮೇ 30ರಂದು ಕವಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಜಯ್ನಗರದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಕ್ಲರ್ಕ್ ಆಗಿ ಕಾರತ್ಯ ನಿರ್ವಹಿಸುತ್ತಿರುವ ಅಬ್ದುಲ್ ರೆಹಮಾನ್ ಅಲಿಯಾಸ್ ನನ್ನಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಜೈನ ಹಾಗೂ ಹಿಂದೂ ಸಮುದಾಯದ ಬಾಲಕರನ್ನು ಮತಂತಾರ ಮಾಡಿರುವುದು ವಿಚಾರಣೆಗೆ ವೇಳೆ ಬೆಳಕಿಗೆ ಬಂದಿದೆ.
ಗಾಜಿಯಾಬಾದ್ನಲ್ಲಿ ಅಪ್ರಾಪ್ತ ವಯಸ್ಕ ಹಿಂದೂ ಬಾಲಕನೋರ್ವ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್ ದಿ ಯೂತ್ ಕ್ಲಬ್ ಹಾಗೂ ತಾರಿಕ್ ಜಮೀಲ್ ಧರ್ಮ ಬೋಧನೆಯ ವಿಡಿಯೋಗಳನ್ನು ನೋಡಿ ಮತಾಂತರಗೊಂಡಿದ್ದಾಗಿ ತಿಳಿಸಿದ್ದಾನೆ.
ಪ್ರಕರಣ ಸಂಬಂಧ ಘಾಜಿಯಾಬಾದ್, ಫರೀದಾಬಾದ್, ಚಂಢೀಘರ್ನಲ್ಲಿ ಹಲವರು ಮತಾಂತರಗೊಂಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಶಹನವಾಜ್ ಮಹಾರಾಷ್ಟ್ರದಲ್ಲಿ ಅಡಗಿರುವ ಬಗ್ಗೆ ಸುಳಿವು ದೊರೆಕಿದ್ದು ಆತನನ್ನು ಬಂಧಿಸಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಘಾಜಿಯಾಬಾದ್ ಡಿಸಿಪಿ ನಿಪುನ್ ಅಗರ್ವಾಲ್ ತಿಳಿಸಿದ್ಧಾರೆ.