ನ್ಯೂಸ್

ಮೊದಲ ವಾರಾಂತ್ಯದ ಬೆನ್ನಲ್ಲೇ 'ಕೂಲ್'​ ಆದ 'ಕೂಲಿ'! ಬಾಕ್ಸ್ ಆಫೀಸ್​ನಲ್ಲಿ ರಜಿನಿಕಾಂತ್​ ಚಿತ್ರ ಗಳಿಸಿದ್ದೆಷ್ಟು? | Coolie

Coolie: ಆ.14ರಂದು ತೆರೆಕಂಡ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಹಾಗೂ ತಮಿಳಿನ ಸೂಪರ್​ಸ್ಟಾರ್​ ರಜಿನಿಕಾಂತ್​​ ಅಭಿನಯದ ‘ಕೂಲಿ’ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದುಬಂದಿವೆ. ರಿಲೀಸ್ ಆದ ಮೊದಲ ದಿನವೇ ಜಾಗತಿಕವಾಗಿ 151 ಕೋಟಿ ರೂ. ಲಾಭ ತೆಗೆದ ಈ ಚಿತ್ರವು, ಇದುವರೆಗೆ ಅತಿಹೆಚ್ಚು ಓಪನಿಂಗ್ ಪಡೆದ ತಮಿಳು ಚಿತ್ರ ಎಂಬ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಜೂ. ಎನ್​ಟಿಆರ್​ ಮತ್ತು ಹೃತಿಕ್ ರೋಷನ್ ಅಭಿನಯದ 'ವಾರ್​ 2' ಹಿಂದಿ ಚಿತ್ರದೊಂದಿಗೆ ಕೂಲಿ ಪೈಪೋಟಿಗಿಳಿದಿರುವುದು ನೋಡುಗರಲ್ಲಿ ಕುತೂಹಲ ಮೂಡಿಸಿದೆ.

4 ದಿನಕ್ಕೆ 404 ಕೋಟಿ ರೂ.!

ಆರಂಭದಲ್ಲಿ 'ಕೂಲಿ' ದಾಖಲೆಯತ್ತ ಸಾಗಿದ್ದೇ ಆದರೂ ದಿನ ಕಳೆದಂತೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾನುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟ ಚಿತ್ರವು, ಭಾರತದಲ್ಲಿ 35 ಕೋಟಿ ರೂ. ಗಳಿಕೆ ಕಂಡಿದೆ. 'ಸಕ್ನಿಲ್ಕ್' ವರದಿಯ ಪ್ರಕಾರ, ಮೊದಲ ವಾರಾಂತ್ಯದ ಕೊನೆಯ ದಿನ ಸಿನಿಮಾ 35 ಕೋಟಿ ರೂ. ಕಲೆಕ್ಷನ್ ಮಾಡಿದೆ. ದೇಶೀಯವಾಗಿ ಕೂಲಿ ಒಟ್ಟು 194.25 ಕೋಟಿ ರೂ. ತಲುಪಿದ್ದು, ಮಂದಗತಿಯಲ್ಲೇ 200 ಕೋಟಿ ರೂ.ನತ್ತ ಸಾಗಿದೆ. ಇನ್ನೂ ಕೇವಲ 4 ದಿನಗಳಲ್ಲಿ ಕೂಲಿ ಜಾಗತಿಕವಾಗಿ 404 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ ಎಂದು ನಿರ್ಮಾಣ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಧಿಕ ಎನ್ನಲಾಗಿದೆ.

ಕೂಲಿ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯೆಷ್ಟು?

ಅಂಕಿಅಂಶಗಳಲ್ಲಿ ಕುಸಿತದ ಹೊರತಾಗಿಯೂ, ಟಿಕೆಟ್ ಮಾರಾಟದಲ್ಲಿ ಕೂಲಿ ದಾಖಲೆಯನ್ನೇ ಬರೆದಿದೆ. ವಿದೇಶಗಳಲ್ಲಿ, ಚಿತ್ರವು ಮೊದಲ ಎರಡು ದಿನಗಳಲ್ಲಿ 12 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಗಳಿಸಿದೆ. ಮತ್ತು ಮೂರನೇ ದಿನದ ವೇಳೆಗೆ 15 ಮಿಲಿಯನ್ ಡಾಲರ್​ ದಾಟಿದೆ. ಒಟ್ಟಾರೆಯಾಗಿ, ಚಿತ್ರದ ಜಾಗತಿಕ ಗಳಿಕೆ ಈಗ 404 ಕೋಟಿ ರೂ.ಗೂ ಹೆಚ್ಚಿದೆ. ಈ ಕಲೆಕ್ಷನ್ ಮೂಲಕ 2025ರಲ್ಲಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮಿಳು ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ವಿಶ್ಲೇಷಕರ ಪ್ರಕಾರ, ಈ ಚಿತ್ರವು ಶೀಘ್ರವೇ ವಿಶ್ವಾದ್ಯಂತ 600 ಕೋಟಿ ರೂ. ತಲುಪುವ ಸಾಧ್ಯತೆಗಳು ಹೆಚ್ಚಿವೆ. ರಜಿನಿಕಾಂತ್ ಅವರ '2.0' ಮತ್ತು 'ಜೈಲರ್' ಚಿತ್ರಗಳ ದಾಖಲೆಗಳಿಗೆ ಸೆಡ್ಡು ಹೊಡೆಯಲು ಕೂಲಿ ಎದುರುನೋಡುತ್ತಿದೆ. ಇಲ್ಲಿಯವರೆಗೆ ಕೇವಲ ಮೂರು ತಮಿಳು ಚಿತ್ರಗಳು ಮಾತ್ರ ಈ ಗಡಿಯನ್ನು ದಾಟಿವೆ. ತಲೈವಾ ಅಭಿನಯದ ಎರಡು ಸಿನಿಮಾಗಳು ಮುಂಚೂಣಿಯಲ್ಲಿದ್ದರೆ, ದಳಪತಿ ವಿಜಯ್ ನಟನೆಯ 'ಲಿಯೋ' ಮೂರನೇ ಸ್ಥಾನದಲ್ಲಿದೆ,(ಏಜೆನ್ಸೀಸ್).