ನವದೆಹಲಿ: 2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅವರ ಕುಟುಂಬಸ್ಥರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳ ಜೈಲು ಶಿಕ್ಷೆ ಮುಗಿಯುವ ಮುನ್ನವೇ ಬಿಡುಗಡೆ ಮಾಡಿರುವ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಸಮಾಜದಲ್ಲಿ ಸುಧಾರಣಾ ಅವಕಾಶವನ್ನು ಪ್ರತಿಯೊಬ್ಬರಿಗೂ ನೀಡಬೇಕು ಆಯ್ದ ವ್ಯಕ್ತಿಗಳಿಗಲ್ಲ ಎಂದು ಕೇಂದ್ರ ಹಾಗೂ ಗುಜರಾತ್ ಸರ್ಕಾರಕ್ಕೆ ಚಾಟಿ ಬೀಸಿದೆ.
ಕ್ಷಮಾದಾನವನ್ನು ಕೆಲವು ಆಯ್ದೆ ವ್ಯಕ್ತಿಗಳಿಗೆ ಮಾತ್ರ ಯಾಕೆ ನೀಡಲಾಗುತ್ತಿದೆ. ಸುಧಾರಣೆ ವಿಚಾರವಾಗಿ ಪ್ರತಿಯೊಬ್ಬ ಅಪರಾಧಿಗೂ ಅವಕಾಶ ನೀಡಬೇಕು ಕೆಲವರಿಗೆ ಅಲ್ಲ. 14 ವರ್ಷಗಳ ನಂತರ ಜೀವಾವಧಿ ಶಿಕ್ಷೆಗೆ ಒಳಗಾಗುತ್ತಿರುವವರಿಗೆ ಕ್ಷಮಾದಾನ ನೀಡಲಾಗುತ್ತಿದೆಯೇ. ಅವರನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲು ಗುಜರಾತ್ ಸರ್ಕಾರ ಮುತುವರ್ಜಿ ವಹಿಸಿತ್ತು. ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ ಎಂದು ದ್ವಿಸದಸ್ಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಗುಜರಾತ್ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಮಾತನಾಡಿ ಅಪರಾಧಿಗಳನ್ನು ಕಾನೂನಿನ ಪ್ರಕಾರ ಬಿಡುಗಡೆ ಮಾಡಲಾಗಿದೆ. ಅವರು 2008 ರಲ್ಲಿ ಶಿಕ್ಷೆಗೊಳಗಾದ ಕಾರಣ, ಅವರನ್ನು 1992 ರ ನೀತಿಯ ಅಡಿಯಲ್ಲಿ ಪರಿಗಣಿಸಬೇಕಾಗಿತ್ತು. ಪ್ರಕರಣದ ಆರೋಪಿಗಳನ್ನು ಸೆಕ್ಷನ್ 432ರ ಅಡಿಯಲ್ಲಿ ಬಿಡುಗಡೆ ಮಾಡಿರುವ ಕುರಿತು ನ್ಯಾಯಪೀಠಕ್ಕೆ ವಿವರಿಸಿದ್ದಾರೆ.
ಬಿಲ್ಕಿಸ್ ಬಾನು ಪರ ವಕೀಲ ಶೋಭಾ ಗುಪ್ತಾ, ಅಪರಾಧಿಗಳ ಬಿಡುಗಡೆ ಕುರಿತು ಗುಜರಾತ್ ಸರ್ಕಾರದ ನಿರ್ಧಾರ ತಪ್ಪು ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‌ನ ಆದೇಶವು ಅಪರಾಧಿ ರಾಧೇಶ್ಯಾಮ್‌ನ ಅರ್ಜಿಗೆ ಸಂಬಂಧಿಸಿದಂತೆ ಮಾತ್ರ, ಆದರೆ ಗುಜರಾತ್ ಸರ್ಕಾರವು ಎಲ್ಲಾ 11 ಅಪರಾಧಿಗಳಿಗೆ ವಿನಾಯಿತಿ ನೀಡಿದೆ ಎಂದು ವಾದ ಮಂಡಿಸಿದ್ದಾರೆ.