ಮುಂಬೈ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಡ್ರಗ್ಸ್ ಮಾಫಿಯಾ ಪ್ರಕರಣದಿಂದ ಕೊಂಚ ನಿರಾಳತೆ ಸಿಕ್ಕಿದೆ. ಏಕೆಂದರೆ ಕೊನೆಗೂ 25 ದಿನಗಳ ಬಳಿಕ ಆರ್ಯನ್ ಖಾನ್ಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕಿದೆ.
ಬಾಂಬೆ ಹೈಕೋರ್ಟ್ ಇಂದು ಆರ್ಯನ್ ಖಾನ್ಗೆ ಜಾಮೀನು ಮಂಜೂರು ಮಾಡಿದ್ದರೂ ಆ ತೀರ್ಪಿನ ಕುರಿತ ಸಂಪೂರ್ಣ ವಿವರವನ್ನು ನ್ಯಾಯಾಲಯ ನಾಳೆ ನೀಡಲಿದೆ. ಈ ಮಧ್ಯೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಚಾರಣೆ ಪ್ರಮುಖ ಹಂತಕ್ಕೆ ಬಂದಿದ್ದು, ಸದ್ಯ ಜಾಮೀನು ಸಿಕ್ಕಿದೆ.
ಅಷ್ಟಕ್ಕೂ ಪ್ರಕರಣದಲ್ಲಿ ಸಿಲುಕಿಕೊಂಡ 25 ದಿನಗಳ ಬಳಿಕ ಸಿಕ್ಕಿರುವ ಈ ಜಾಮೀನಿನ ಕುರಿತು ಹಲವರಿಗೆ ಕುತೂಹಲ ಮೂಡಿದೆ. ಅದರಲ್ಲೂ ಜಾಮೀನು ಸಿಗಲು ಪ್ರಮುಖ ಕಾರಣ ಹಿರಿಯ ಹಾಗೂ ಖ್ಯಾತ ವಕೀಲರ ವಾದ ಒಂದೆಡೆಯಾದರೆ ಇನ್ನೊಂದೆಡೆ ಇನ್ನೆರಡು ಪ್ರಮುಖ ಅಂಶಗಳೂ ಕಾರಣ ಎನ್ನಲಾಗಿದೆ.
ಆರ್ಯನ್ ಖಾನ್ ಪರವಾಗಿ ವಾದ ಮಂಡಿಸಿರುವುದು ಮಾಜಿ ಅಟಾರ್ನಿ ಜನರಲ್ ಆಫ್ ಇಂಡಿಯಾ ಮುಕುಲ್ ರೋಹಟ್ಗಿ. ಅಟಾರ್ನಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಕೂಡ ಆಗಿದ್ದ ಇವರು ಈ ಹಿಂದೆ ಹಲವು ಹೈ ಪ್ರೊಫೈಲ್ ಕೇಸ್ಗಳಲ್ಲೂ ವಾದಿಸಿದ್ದರು. 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರದ ಪರವಾಗಿ ಅವರು ವಾದ ಮಂಡಿಸಿದ್ದರು. ಇನ್ನು ಅವರ ತಂದೆ ಅವಧ್ ಬೆಹರಿ ರೋಹಟ್ಗಿ ದೆಹಲಿ ಹೈಕೋರ್ಟ್ನ ಖ್ಯಾತ ವಕೀಲರಾಗಿದ್ದರು. ಅಲ್ಲದೆ ಮುಕುಲ್ ರೋಹಟ್ಗಿಗೂ ಮೊದಲು ಇನ್ನಿಬ್ಬರು ಖ್ಯಾತ ವಕೀಲರಾದ ಸತೀಶ್ ಮಾನೆಶಿಂಧೆ ಮತ್ತು ಅಮಿತ್ ದೇಸಾಯಿ ಕೂಡ ಆರ್ಯನ್ ಖಾನ್ ಪರವಾಗಿ ವಾದ ಮಂಡಿಸಿದ್ದರು.
ಮತ್ತೊಂದೆಡೆ ಆರ್ಯನ್ ಬಳಿ ನಡೆಸಿದ್ದ ವಾಟ್ಸ್ಆ್ಯಪ್ ಚಾಟ್ನಲ್ಲಿ ಅಂಥ ಯಾವುದೇ ಪೂರಕ ಅಂಶ ಸಿಕ್ಕಿರಲಿಲ್ಲ. ಇನ್ನೊಂದೆಡೆ ಬಂಧನದ ವೇಳೆ ಆರ್ಯನ್ ಬಳಿ ಪತ್ತೆಯಾಗಿರುವ ಮಾದಕ ದ್ರವ್ಯ ವಾಣಿಜ್ಯ ಬಳಕೆಗೆ ಎನ್ನುವಷ್ಟು ಪ್ರಮಾಣದಲ್ಲಿ ಇರಲಿಲ್ಲ. ಅಷ್ಟಕ್ಕೂ ಎಲ್ಲರ ಬಳಿ ಸಿಕ್ಕ ಮಾದಕ ವಸ್ತುವನ್ನು ಒಟ್ಟು ಸೇರಿಸಿ ಅದನ್ನು ವಾಣಿಜ್ಯ ಬಳಕೆ ಪ್ರಮಾಣ ಎಂದು ಹೇಳಲಾಗದು ಎಂದು ವಕೀಲರು ವಾದ ಮಂಡಿಸಿದ್ದರಿಂದ ಜಾಮೀನು ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.