ನ್ಯೂಸ್

ಮಳೆಯ ಅಬ್ಬರಕ್ಕೆ ಮನೆ ಕುಸಿತ: ಮನೆಯೊಡತಿ ಪಾರಾದದ್ದೇ ಅದೃಷ್ಟ!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ಮುಂಜಾನೆ ಸುರಿದ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿ ಅವ್ಯವಸ್ಥೆಯಿಂದ ಹಲವೆಡೆ ತೋಟಗಳಲ್ಲಿ ನೀರು ತುಂಬಿಕೊಂಡಿದೆ. ಬೆಳೆ ನಷ್ಟಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಬೀಡಗಾನಹಳ್ಳಿಯಲ್ಲಿ ಬಿರುಸಿನ ಮಳೆಯಿಂದಾಗಿ ಮನೆಯೊಂದು ಕುಸಿದುಬಿದ್ದಿದೆ. ಅದೃಷ್ಟವಶಾತ್ ಮನೆಯೊಡತಿ ಮುನಿರತ್ನಮ್ಮ ಪಾರಾಗಿದ್ದಾರೆ. ಮಳೆಯ ಆತಂಕದಲ್ಲಿ ನಿನ್ನೆ ರಾತ್ರಿ ಅವರು ಪಕ್ಕದ ಮನೆಯಲ್ಲಿ ಮಲಗಿದ್ದರು. ಬಿದ್ದ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಜೀವಹಾನಿಯಾಗುವುದು ತಪ್ಪಿದೆ ಎನ್ನಲಾಗಿದೆ.

ರಸ್ತೆಗಳು ಜಲಾವೃತಗೊಂಡಿದ್ದು, ನಂದಿ ಕ್ರಾಸ್​​ನ ಸಮೀಪದ ರಾಷ್ಟೀಯ ಹೆದ್ದಾರಿಯಲ್ಲಿ ಬಸ್​​ ಒಂದು ನೀರಿನಲ್ಲಿ ಸಿಲುಕಿಕೊಂಡಿದೆ. ನೀರಿನಲ್ಲಿ ಬಸ್ ನಿಂತಿರುವ ಹಿನ್ನೆಲೆ ಪ್ರಯಾಣಿಕರು ಪಾಡುಪಟ್ಟಿದ್ದಾರೆ.