ನ್ಯೂಸ್

WhatsApp ಗ್ರೂಪ್​ನಲ್ಲಿ ಎಮೋಜಿ ಪೋಸ್ಟ್​ ಹಾಕಿದ್ದಕ್ಕೆ ಭೀಕರ ಕೊಲೆ!

WhatsApp: ವಾಟ್ಸಾಪ್​ ಗ್ರೂಪ್​ನಲ್ಲಿ ಒಬ್ಬರನ್ನ ಬೆಂಬಲಿಸಿ ಎಮೋಜಿ ಪೋಸ್ಟ್ ಹಾಕಿದ್ದಕ್ಕೆ ಗಲಾಟೆ ನಡೆದು ಓರ್ವ ಕೊಲೆಯಾದ ಘಟನೆ ತೆಲಂಗಾಣದ ಸೂರ್ಯಂಪೇಟೆ ಜಿಲ್ಲೆಯಲ್ಲಿ ಮಂಗಳವಾರ(ಜು.22) ನಡೆದಿದೆ. ಸೂರ್ಯಂಪೇಟೆ ನಿವಾಸಿ ಮನುಪುರಿ ಕೃಪಾಕರ್ ಮೃತ ಎಂದು ಗುರುತಿಸಲಾಗಿದೆ.

ಘಟನೆ ಏನು?

ಆಗಸ್ಟ್ 3ರಂದು ಸೂರ್ಯಂಪೇಟೆ ಜಿಲ್ಲೆಯ ಪದ್ಮಸಾಲಿ ಕುಲ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು,  ಶ್ರೀರಾಮುಲು ಮತ್ತು ಎಲಗುಂಡಲ ಸುದರ್ಶನ್ ನಡುವೆ ಪೈಪೋಟಿ ಏರ್ಪಟ್ಟಿತ್ತು.

ಈ  ಹಿನ್ನೆಲೆ ಶ್ರೀರಾಮುಲು ಹಿಂದಿನ ಅಧ್ಯಕ್ಷ ಅಪ್ಪಂ ಶ್ರೀನಿವಾಸ್ ವಿರುದ್ಧ ವಾಟ್ಸಾಪ್​ನಲ್ಲಿ ಪೋಸ್ಟ್ ಹಾಕಿದ್ದರು. ಅದಕ್ಕೆ ಕೊಲೆಯಾದ ಮನುಪುರಿ ಕೃಪಾಕರ್ ಅಪ್ಪಂ ಶ್ರೀನಿವಾಸ್  ಬೆಂಬಲಿಸಿ ಎಮೋಜಿಗಳನ್ನ ಪೋಸ್ಟ್ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶ್ರೀರಾಮುಲು ಬಣದವರು ದಾಳಿ ಮಾಡಿ ಭೀಕರವಾಗಿ ಹಲ್ಲೆ ನಡೆಸಿದ್ದರಿಂದ ಕೃಪಾಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನತೆ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.( ಏಜೆನ್ಸೀಸ್ )