ನ್ಯೂಸ್

VIDEO| ಆ್ಯಂಬುಲೆನ್ಸ್​ಗೆ ಡಿಕ್ಕಿ ಹೊಡೆದ ಸಚಿವರ ಬೆಂಗಾವಲು ವಾಹನ

ತಿರುವನಂತಪುರಂ: ಸಚಿವರ ಬೆಂಗಾವಲು ವಾಹನವೊಂದು ಆ್ಯಂಬುಲೆನ್ಸ್​ಗೆ​ ಡಿಕ್ಕಿ ಹೊಡೆದು ಬಳಿಕ ಬೈಕ್​ ಒಂದಕ್ಕೆ ಗುದ್ದಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಕೇರಳ ಸರ್ಕಾರದ ಶಿಕ್ಷಣ ಸಚಿವ ಶಿವನ್​ಕುಟ್ಟಿ ಅವರ ಬೆಂಗಾವಲು ವಾಹನ ಆ್ಯಂಬುಲೆನ್ಸ್​ಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸರ್ಕಲ್​ ಒಂದಕ್ಕೆ ಸಚಿವರ​ ಕಾರು ರಸ್ತೆಯ ಮತ್ತೊಂದು ಬದಿಯಿಂದ ಬರುತ್ತದೆ. ಈ ವೇಳೆ ಎದುರಿನಿಂದ ರೋಗಿಯನ್ನು ಹೊತ್ತು ಸಾಗುತ್ತಿದ್ದ ಆ್ಯಂಬುಲೆನ್ಸ್​ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗುವುದನ್ನು ನೋಡಬಹುದಾಗಿದೆ. ಇದಾದ ಬಳಿಕ ಚಾಲಕ ವಾಹನವನ್ನು ನಿಲ್ಲಿಸಲು ಮುಂದಾಗುವಷ್ಟರಲ್ಲೇ ಮುಂಬದಿ ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆಯುತ್ತದೆ.

ಹಿಂಬದಿ ಇದ್ದ ಸಚಿವರ ಕಾರು ಘಟನೆ ನಡೆದ ಬಳಿಕ ನಿಲ್ಲಿಸದೆ ತಮ್ಮ ಪಾಡಿಗೆ ಹೋಗುತ್ತಿರುವುದು ಕಂಡು ಬಂದಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಸಾರ್ವಜನಿಕರ ನೆರವಿನಿಂದ ಆ್ಯಂಬುಲೆನ್ಸ್​ಅನ್ನು ಮೇಲಕ್ಕೆ ಎತ್ತಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.