

ಲಖನೌ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಟೊಮ್ಯಾಟೋ ತುಂಬಿರುವ ಲಾರಿ ಕಳ್ಳತನವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ ಖದೀಮರು ಮೊಟ್ಟೆ ಸಾಗಿಸುತ್ತಿದ್ದ ಕಂಟೇನರ್ಅನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದು, ಬಂಧಿತರನ್ನು ಮೊಹಮ್ಮದ್ ಫರಾಜ್, ಮುಮ್ತಾಜ್, ಅಜ್ಮತ್, ಸೂಫಿಯಾನ್ ಹಾಗೂ ಇಷ್ತಿಯಾಕ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಐದು ಲಕ್ಷ ರೂಪಾಯಿ ಮೌಲ್ಯದ ಮೊಟ್ಟೆ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಲಖನೌ ಉತ್ತರ ಡಿಸಿಪಿ ಕಾಸಿಮ್ ಅಬ್ದಿ ಹರಿಯಾಣದಿಂದ ಮೊಟ್ಟೆಗಳನ್ನು ಮೋತಿಲಾಲ್ ಮತ್ತು ಮುನ್ನಾಲಾಲ್ ಎಂಬುವವರು ತಮ್ಮ ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ವಿಚಾರ ತಿಳಿದು ಕಂಟೇನರ್ ಇತೌಂಜಾ ಪ್ರದೇಶ ತಲುಪಿದಾಗ ಕಾರಿನಲ್ಲಿ ಬಂದ ಐವರು ಆರೋಪಿಗಳು ಲಾರಿಯನ್ನು ಅಡ್ಡಗಟ್ಟಿ ಮೋತಿಲಾಲ್ ಮತ್ತು ಮುನ್ನಾಲಾಲ್ ಅವರ ಮೇಲೆ ಕಾರಣ ಇಲ್ಲದೆ ಹಲ್ಲೆ ನಡೆಸಲು ಶುರು ಮಾಡಿದ್ದಾರೆ.
ಇದಾದ ಬಳಿಕ ಆರೋಪಿಗಳು ಲಾರಿಯನ್ನು ಕದ್ದು ಪರಾರಿಯಾಗಿದ್ದಾರೆ. ಗಾಯಾಳುಗಳು ಈ ಸಂಬಂಧ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆ ಕುರಿತು ವಿವರಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ಮೊಹಮ್ಮದ್ ಫರಾಜ್ ಮೊಟ್ಟೆ ಅಂಗಡಿ ಮಾಲೀಕನಾಗಿದ್ದು, ಮುಮ್ತಾಜ್ ಈತನ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಉಳಿದವರು ಈತನಿಗೆ ಕಳ್ಳತನ ಮಾಡಲು ಸಾಥ್ ನೀಡಿದ್ದಾರೆ ಎಂದು ಲಖನೌ ಉತ್ತರ ಡಿಸಿಪಿ ಕಾಸಿಮ್ ಅಬ್ದಿ ತಿಳಿಸಿದ್ದಾರೆ.