ನವದೆಹಲಿ: ಕಳೆದ ಕೆಲವು ದಿನಗಳಿಂದ ಉತ್ತರ ಭಾರತದ ಹಲವು ಕಡೆ ಮಳೆರಾಯ ಆರ್ಭಟಿಸುತ್ತಿದ್ದು, ಯಮುನೆಯ ರುದ್ರನರ್ತನಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದೆ. ನಗರದ ಬಹುತೇಕ ಭಾಗ ಜಲಾವೃತಗೊಂಡಿದ್ದು, ನೀರು ಸುಪ್ರೀಂ ಕೋರ್ಟ್ವರೆಗೂ ತಲುಪಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ಸಹಾಯ ಪಡೆಯುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಮಳೆ ಬಿರುಸು; ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ದೆಹಲಿಯ ಕೆಲವು ಪ್ರದೇಶದಲ್ಲಿ ನೀರು ಕಡಿಮೆಯಾಗಲು ಶುರುವಾದ ನಂತರ ವಿಕಾಸ್ ಭವನದ ಬಳಿ ಇರುವ ಡ್ರೈನ್ ರೆಗ್ಯುಲೇಟರ್ ಕೆಟ್ಟು ಹೋದ ಕಾರಣ ITO ಹಾಗೂ ರಾಜ್ಘಾಟ್ ಪ್ರದೇಶಗಳ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಸುಮಾರು ಘಂಟೆಗಳ ಕಾಲ ಪರದಾಡಿದರು.
ತೀವ್ರ ಮಳೆಯಿಂದಾಗಿ ನಗರದಲ್ಲಿರುವ ನೀರು ಸಂಸ್ಕರಣಾ ಘಟಕಗಳು ಕೆಟ್ಟು ಹೋಗಿದ್ದು, ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. ಪ್ರವಾಹದ ನೀರು ತಿಲಕ್ ಮಾರ್ಗದಲ್ಲಿರುವ ಸುಪ್ರೀಂ ಕೋರ್ಟ್ವರೆಗೂ ತಲುಪಿದ್ದು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಸಿಎಂ ಅಧಿಕಾರಿಗಳಿದ ಸೂಚಿಸಿದ್ದಾರೆ.