ನ್ಯೂಸ್

ನ್ಯಾಯಾಲಯದ ಮುಂಭಾಗದಲ್ಲೇ ರೌಡಿಶೀಟರ್​ ಹತ್ಯೆ; ವಕೀಲರ ಸ್ಥಿತಿಯೂ ಚಿಂತಾಜನಕ

ಚೆನ್ನೈ: ಪ್ರಕರಣದ ವಿಚಾರಣೆ ಮುಗಿಸಿ ಕೋರ್ಟ್​ನಿಂದ ಹೊರಬರುತ್ತಿದ್ದ ವೇಳೆ ಗುಂಪೊಂದು ರೌಡಿಶೀಟರ್​ನನ್ನು ನ್ಯಾಯಾಲಯದ ಮುಂಭಾಗದಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುವರೂರು ಜಿಲ್ಲೆಯಲ್ಲಿ ನಡೆದಿದೆ.

ಓನನ್​ ಸೆಂಥಿಲ್​ ಕೊಲೆಯಾದವರು ಎಂದು ತಿಳಿದು ಬಂದಿದೆ. ಆತನ ಜೊತೆಗಿದ್ದ ವಕೀಲರಾದ ಅಗಿಲನ್​ ಹಾಗೂ ಭಾರತಿರಾಜ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ

ಘಟನರೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ಓನನ್​ ಸೆಂಥಿಲ್​ ವಿರುದ್ಧ ಕೊಲೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿಗೆ ಜಾಮೀನಿನ ಮೇಲೆ ಈತ ಬಿಡುಗಡೆಯಾಗಿ ಹೊರ ಬಂದಿದ್ದ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೊಲೆ ನಡೆದಿದ್ದು, ಆರೋಪಿಗಳು ಮೊದಲೇ ಶಸ್ತ್ರಸಜ್ಜಿತರಾಗಿ ಕೃತ್ಯ ಎಸಗಿದ್ದಾರೆ.

ಆರೋಪಿಗಳು ಸೆಂಥಿಲ್​ ಜೊತೆಗಿದ್ದ ವಕೀಲರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಘಟನೆ ನಡೆದ ಪ್ರದೇಶದ ಸುತ್ತ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ನ್ಯಾಯಾಲಯದ ಆವರಣದಲ್ಲಿ ಹತ್ಯೆ ಹಾಗೂ ಮಾರಣಾಂತಿಕ ಹಲ್ಲೆಯಾಗಿರುವುದನ್ನು ಖಂಡಿಸಿ ಕುಂಭಕೋಣಂನಲ್ಲಿ ವಕೀಲರ ಸಂಘವು ರಸ್ತೆ ತಡೆದು ಪ್ರತಿಭಟನೆ ನಡೆಸಿತ್ತು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲಗೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟನಾ ನಿರತ ವಕೀಲರು ಆಗ್ರಹಿಸಿದ್ದಾರೆ.