ನ್ಯೂಸ್

'ಫೇರ್​ ಆ್ಯಂಡ್​ ಲವ್ಲೀ'ಯಲ್ಲಿ ಇನ್ನು ಮುಂದೆ ಇರೋದಿಲ್ಲ ಫೇರ್​; ಏನು ಹೇಳುತ್ತೆ ಕಂಪನಿ ?

ನವದೆಹಲಿ: ಮಹಿಳೆಯರ ಫೇರ್​ನೆಸ್​ ಕ್ರೀಮ್​ ' ಫೇರ್​ ಆ್ಯಂಡ್​ ಲವ್ಲೀ'ಯಲ್ಲಿ ಇನ್ನು ಮುಂದೆ 'ಫೇರ್​' ಇರೋದಿಲ್ಲ. ಹಾಗಂತಾ ಕಂಪನಿಯೇ ಘೋಷಣೆ ಮಾಡಿದೆ.

'ಫೇರ್​ ಆ್ಯಂಡ್​ ಲವ್ಲೀ' ಹಿಂದುಸ್ಥಾನ್​ ಯುಲೀವರ್ ಕಂಪನಿಯ ಅತ್ಯಂತ ಜನಪ್ರಿಯ ಫೇರ್​ನೆಸ್​ ಕ್ರೀಮ್​ ಆಗಿದೆ. ಬೆಳ್ಳಗೆ ಹಾಗೂ ಸುಂದರವಾಗಿ ಕಾಣಲು ಇದನ್ನೇ ಬಳಸಿ ಎಂದು ಕಂಪನಿ ದಶಕಗಳಿಂದ ಹೇಳುತ್ತ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥ ಸಂದೇಶ ಸಾರುವ ಜಾಹೀರಾತುಗಳಿಗೆ ವಿರೋಧ ವ್ಯಕ್ತವಾಗಿದೆ. ಜತೆಗೆ, ಇದು ಬೆಳ್ಳಗೆ ಅಥವಾ ಗೌರವರ್ಣ ಹೊಂದಿಲ್ಲದವರನ್ನು ತಾರತಮ್ಯದಿಂದ ಕಾಣುವಂತೆ ಮಾಡುತ್ತದೆ ಎನ್ನುವುದು ಈ ಕ್ರೀಮ್​ ಬಗ್ಗೆ ಇರುವ ಆಕ್ರೋಶ. ಈ ಕಾರಣಕ್ಕಾಗಿಯೇ ಫೇರ್​ನೆಸ್​ ಕ್ರೀಮ್​ನ ಹೆಸರು ಬದಲಾವಣೆಗೆ ನಿರ್ಧರಿಸಿದೆ.

'ಫೇರ್​ ಆ್ಯಂಡ್​ ಲವ್ಲೀ'​ ಎಂಬ ಹೆಸರಿನಲ್ಲಿರುವ 'ಫೇರ್​' ಎಂಬ ಪದವನ್ನು ಕೈಬಿಡಲಿದೆ. ಕಂಪನಿಯು ಚರ್ಮದ ಎಲ್ಲ ವರ್ಣಗಳನ್ನು ಸಂಭ್ರಮಿಸಲು ಅಥವಾ ಗೌರವಿಲಸು ಬದ್ಧವಾಗಿದೆ ಎಂದು ಹೇಳಿಕೊಂಡಿದೆ. ಈ ಕ್ರೀಮ್​ಗೆ ಹೊಸ ಹೆಸರನ್ನು ನೀಡಲಾಗಿದ್ದು, ಸಂಬಂಧಿಸಿದ ಪ್ರಾಧಿಕಾರದಿಂದ ಒಪ್ಪಿಗೆ ಪಡೆದ ಬಳಿಕ ಅನಾವರಣಗೊಳಿಸಲಾಗುವುದು ಎಂದು ಹಿಂದುಸ್ತಾನ್​ ಯುನಿಲೀವರ್​ ಗುರುವಾರ (ಜೂ.25) ಹೇಳಿಕೆ ನೀಡಿದೆ.

ಅಮೆರಿದಲ್ಲಿ ಕಪ್ಪು ಜನರ 'ಬ್ಲ್ಯಾಕ್​ ಲೀವ್ಸ್​ ಮ್ಯಾಟರ್ಸ್​' ಜಗತ್ತಿನ ವಿವಿಧ ದೇಶಗಳಿಗೆ ಪಸರಿಸಿದೆ. ಚರ್ಮದ ಬಣ್ಣವನ್ನಾಧರಿಸಿ ನಡೆಯುವ ತಾರತಮ್ಯದ ವಿರುದ್ಧ ಜನರು ದನಿ ಎತ್ತಿದ್ದಾರೆ. ಹಲವು ಕಂಪನಿಗಳ ಫೇರ್​ನೆಸ್​ ಉತ್ಪನ್ನಗಳು ಕೂಡ ಕೆಂಗಣ್ಣಿಗೆ ಗುರಿಯಾಗಿವೆ. ಈ ಎಲ್ಲ ಕಾರಣದಿಂದಾಗಿ ಇನ್ನು ಮುಂದೆ ಶ್ವೇತ ವರ್ಣವನ್ನು ಪ್ರತಿನಿಧಿಸುತ್ತಿದ್ದ 'ಫೇರ್​' ಎಂಬ ಪದವನ್ನು ಬಳಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಇದಲ್ಲದೇ, ಉತ್ಪನ್ನ ಹಾಗೂ ಅವುಗಳ ಪ್ಯಾಕೆಟ್​ ಮೇಲೆ ಫೇರ್​, ವೈಟ್​, ವೈಟ್​ನಿಂಗ್​, ಲೈಟ್​, ಲೈಟ್​ನಿಂಗ್​ ಎಂಬ ಪದಗಳನ್ನು ಬಳಸದಿರಲು ನಿರ್ಧರಿಸಿದೆ. ಚರ್ಮ ರಕ್ಷಣೆ ಉತ್ಪನ್ನಗಳು ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ಕಂಪನಿಯ ಮುಖ್ಯಸ್ಥ ಸಂಜೀವ್​ ಮೆಹ್ತಾ ಹೇಳಿದ್ದಾರೆ.