ನ್ಯೂಸ್

ಸನಾತನ ಧರ್ಮದ ಪ್ರಕಾರ ಹಿಂದುಗಳು ಜಟ್ಕಾ ಕಟ್​ ಮಾಂಸವನ್ನು ಮಾತ್ರ ತಿನ್ನಬೇಕು: ಕೇಂದ್ರ ಸಚಿವ ಗಿರಿರಾಜ್ ಸಿಂಗ್

ನವದೆಹಲಿ: ಸನಾತನ ಧರ್ಮದ ನಿಯಮಗಳ ಪ್ರಕಾರ ಹಿಂದುಗಳು ಹಲಾಲ್​ ಕಟ್​ ಬದಲು ಜಟ್ಕಾ ಮಾಂಸವನ್ನು ತಿನ್ನಲು ಪ್ರಾರಂಭಿಸಬೇಕು ಎಂದು ಹೇಳುವ ಮೂಲಕ ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.

ಹಿಂದುಗಳು ಯಾವುದೇ ಕಾರಣಕ್ಕೂ ಹಲಾಲ್​ ಮಾಂಸವನ್ನು ತಿನ್ನಬೇಡಿ. ಒಂದೇ ಏಟಿನಲ್ಲಿ ಪ್ರಾಣಿಗಳನ್ನು ಕತ್ತರಿಸಿರುವ ಜಟ್ಕಾ ಕಟ್ ಮಾಂಸವನ್ನು ಸೇವಿಸಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.

ಬಿಹಾರದ ಬೇಗುಸರಾಯ್​ನಲ್ಲಿ ಮಾತನಾಡಿದ ಗಿರಿರಾಜ್​ ಸಿಂಗ್, ನಾನು ಅವರ ಧರ್ಮಕ್ಕೆ ಬದ್ದರಾಗಿರುವ ಮುಸ್ಲಿಮರನ್ನು ಸದಾ ಗೌರವಿಸುತ್ತೇನೆ. ಹಿಂದುಗಳು ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಸನಾತನ ಧರ್ಮದಲ್ಲಿ ಬಲಿ ಪ್ರಾಥ (ಪ್ರಾಣಿ ಬಲಿ) ಇದೇ. ಬಲಿ ಪ್ರಾಥದಲ್ಲಿ ಜಟ್ಕಾ ಇದ್ದು ಎಲ್ಲರೂ ಅದನ್ನೇ ಸೇವಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಅದಕ್ಕಾಗಿ ನಾನು ಜಟ್ಕಾ ಕಟ್​ ಅಂಗಡಿಯನ್ನು ತೆರೆಯುತ್ತೇನೆ ಎಂದು ಹೇಳಿದ್ದಾರೆ.

ಇತ್ತ ಕೇಂದ್ರ ಸಚಿವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನವದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ವಿಪಕ್ಷಗಳು ಕೇಂದ್ರ ಸಚಿವೆ ಈ ಹೇಳಿಕೆಯನ್ನು ಹೇಗೆ ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ ಎಂದು ಕಾದು ನೋಡಬೇಕಿದೆ.