ನವದೆಹಲಿ: ಜಗತ್ತಿನ ಇತರೆ ಹಿಮಪರ್ವತಗಳಿಗೆ ಹೋಲಿಸಿ ದರೆ ಹಿಮಾಲಯದ ಗ್ಲೇಸಿಯರ್ ಅಥವಾ ನೀರ್ಗಲ್ಲುಗಳು ಅಸಾಧಾರಣ ವೇಗದಲ್ಲಿ ಕರಗುತ್ತಿವೆ ಎಂದು ಸೋಮವಾರ ಪ್ರಕಟವಾಗಿರುವ ಹೊಸ ಅಧ್ಯಯನ ವರದಿ ಹೇಳಿದೆ. ಬ್ರಿಟನ್ನ ಯೂನಿವರ್ಸಿಟಿ ಆಫ್ ಲೀಡ್ಸ್ನ ವಿಜ್ಞಾನಿಗಳ ನೇತೃತ್ವದ ತಂಡ ಈ ಅಧ್ಯಯನ ನಡೆಸಿದ್ದು, ಮೂರನೇ ಧ್ರುವ ಎಂದು ಗುರುತಿಸಲ್ಪಟ್ಟಿರುವ ಹಿಮಾಲಯದ ಹಿಮಪರ್ವತ ಗಳಿಂದ ಹಿಮ ನಷ್ಟಕ್ಕೆ ಹೊಸ ಸಾಕ್ಷ್ಯಗಳನ್ನೂ ಸಂಗ್ರಹಿಸಿದೆ. ಇತ್ತೀಚಿನ ದಶಕಗಳ ಅವಧಿಯಲ್ಲಿ ಹಿಮಾಲಯದ ಗ್ಲೇಸಿಯರ್ಗಳು ಅದಕ್ಕೂ ಹಿಂದಿನ ದಶಕಗಳಿಗೆ ಹೋಲಿಸಿದರೆ 10 ಪಟ್ಟು ವೇಗದಲ್ಲಿ ಹಿಮದ ಹೊದಿಕೆಯನ್ನು ಕಳೆದುಕೊಳ್ಳುತ್ತಿವೆ.
ಭವಿಷ್ಯದಲ್ಲಿ ನೀರು ಸಿಗಲ್ಲ: ಹಿಮಾಲಯದ ಗ್ಲೇಸಿಯರ್ಗಳು ಹೀಗೆ ಕರಗಿ ಹೋದರೆ ಮುಂದೆ ಭಾರತ ಮತ್ತು ಪಾಕಿಸ್ತಾನಿಯರಿಗೆ ನೀರಿನ ಅಭಾವ ಕಾಡಲಿದೆ. ಈ ಬಗ್ಗೆ ಈಗಲೇ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಯೂನಿವರ್ಸಿಟಿ ಆಫ್ ಲೀಡ್ಸ್ ಸ್ಕೂಲ್ ಆಫ್ ಜಿಯಾಗ್ರಫಿ ಡೆಪ್ಯುಟಿ ಹೆಡ್ ಜೋನಾಥನ್ ಕಾರ್ರಿವಿಕ್ ಎಚ್ಚರಿಸಿದ್ದಾರೆ. ಇವರ ಅಧ್ಯಯನ ವರದಿ ಸೈಂಟಿಫಿಕ್ ರಿಪೋರ್ಟ್ಸ್ನಲ್ಲಿ ಪ್ರಕಟವಾಗಿದೆ.
3ನೇ ಅತಿದೊಡ್ಡ ಹಿಮಪರ್ವತ: ಹಿಮಾಲಯ ಪರ್ವತ ಶ್ರೇಣಿಯು ಜಗತ್ತಿನ ಮೂರನೇ ಅತಿದೊಡ್ಡ ಹಿಮಪರ್ವತ ಶ್ರೇಣಿಯಾಗಿದೆ. ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ ನಂತರ ಮೂರನೇ ಧ್ರುವ ಅಥವಾ ದ ಥರ್ಡ್ ಪೋಲ್ ಎಂದು ಗುರುತಿಸಲ್ಪಟ್ಟಿರುವ ಪರ್ವತ ಶ್ರೇಣಿ ಇದು. ಏಷ್ಯಾದ ಬಹುತೇಕ ನದಿಗಳ ಉಗಮ ಸ್ಥಾನ ವಿಶೇಷವಾಗಿ ಬ್ರಹ್ಮಪುತ್ರ, ಗಂಗಾ, ಯಮುನಾ, ಸಿಂಧು ಮತ್ತು ಉಪನದಿಗಳು ಇಲ್ಲಿಂದಲೇ ಹುಟ್ಟಿ ಹರಿಯುತ್ತಿವೆ.
ಹಿಮಾಲಯದ ವಿಸ್ತರಿತ ಗ್ಲೇಸಿಯರ್ನಲ್ಲೇ ನಷ್ಟ: ಹಿಮಾಲಯದಲ್ಲಿ 400-700 ವರ್ಷಗಳ ಹಿಂದೆ ಹಿಮಪರ್ವತಗಳ ವಿಸ್ತರಣೆಯಾಗಿತ್ತು. ಆ ಅವಧಿಯನ್ನು ‘ಲಿಟಲ್ ಐಸ್ ಏಜ್’ ಎಂದು ಗುರುತಿಸುತ್ತಾರೆ. ಆಗ 14,798 ಹಿಮದ ಮೇಲ್ಮೈ ನಿರ್ವಣವಾಗಿತ್ತು. ಉಪಗ್ರಹ ಚಿತ್ರಗಳು ಕೂಡ ಇದನ್ನು ದೃಢೀಕರಿಸಿವೆ. 28,000 ಚದರ ಕಿ.ಮೀ. ಆವರಿಸಿದ್ದ ಹಿಮ ನದಿ ಈಗ 19,600 ಚದರ ಕಿ.ಮೀ.ಗೆ ಸಂಕುಚಿತವಾಗಿದೆ. ಅಂದರೆ ಗ್ಲೇಸಿಯರ್ಗಳು ಶೇಕಡ 40 ಪ್ರದೇಶವನ್ನು ಕಳೆದುಕೊಂಡಿವೆ. 390-586 ಕ್ಯುಬಿಕ್ ಕಿ.ಮೀ. ಹಿಮದ ಹೆಬ್ಬಂಡೆಗಳು ನಷ್ಟವಾಗದೆ. ಬಹುತೇಕ ಪೂರ್ವ ಹಿಮಾಲಯ ಭಾಗದಲ್ಲೇ ಈ ನಷ್ಟ ಸಂಭವಿಸಿದೆ.